ಶುಕ್ರವಾರ, ಜನವರಿ 22, 2021
19 °C
ಹೊಸ ಉಪ್ಪಾರಹಳ್ಳಿಯಲ್ಲಿ ಕೆರೆ ಅಂಗಳದಲ್ಲಿ ಚಿಗುರುತ್ತಿವೆ ಸಸಿಗಳು

ಗೌರಿಬಿದನೂರು: ನರೇಗಾದಲ್ಲಿ ಅರಳಿದ ಸಸ್ಯೋದ್ಯಾನ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಮಳೆಯಿಲ್ಲದೆ ಬರಡಾಗಿದ್ದ ಕೆರೆಯಂಗಳದಲ್ಲಿ ಗಿಡ ನೆಟ್ಟು ವನ್ಯಧಾಮವನ್ನು ನಿರ್ಮಿಸಿ ಪರಿಸರ ಸಂರಕ್ಷಣೆಯ ಜತೆಗೆ ಹಳ್ಳಿಯನ್ನು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದಾರೆ.

ತಾಲ್ಲೂಕಿನ ರಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೊಸ ಉಪ್ಪಾರಹಳ್ಳಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ವನ್ಯಧಾಮ ನಿರ್ಮಿಸುವ ಕಾರ್ಯಸಾಗಿದೆ.

ದಶಕಗಳಿಂದ ಸಮರ್ಪಕ ಮಳೆಯಿಲ್ಲದೆ ಕೆರೆಯ ಅಂಗಳ ಬರಡು ಭೂಮಿಯಾಗಿತ್ತು. ಜಾಲಿ ಮರಗಳಿಂದ ತುಂಬಿತ್ತು. ಇಂತಹ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ಥಳೀಯ ಯುವಕರು ಕೈಜೋಡಿಸಿ ವಿವಿಧ ಬಗೆಯ ಸುಮಾರು 950ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಪೋಷಿಸುತ್ತಿದ್ದಾರೆ.

ಜಲಾಮೃತ ಯೋಜನೆಯಡಿಯಲ್ಲಿ ಮಳೆ ನೀರನ್ನು ಸಂರಕ್ಷಣೆ ಮಾಡಿ ಅಂತರ್ಜಲವನ್ನು ಉಳಿಸುವ ಉದ್ಧೇಶದಿಂದ ಹಾಗೂ ಗಿಡಗಳ ಪೋಷಣೆಗೆ ಅವಶ್ಯಕವಿರುವ ನೀರನ್ನು ಸಂಗ್ರಹಣೆ ಮಾಡಲು ಕರ್ನಾಟಕ ಭೂಪಟವನ್ನು ಹೋಲುವ ಕುಂಟೆಯನ್ನು ನಿರ್ಮಾಣ ಮಾಡಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಇಂತಹ ಮಾದರಿ ಕಾರ್ಯವನ್ನು ಮಾಡಬಹುದಾಗಿದೆ ಎಂಬುದನ್ನು ಇಲ್ಲಿನ ಗ್ರಾಮ ಪಂಚಾಯಿತಿ ‌ಸಿಬ್ಬಂದಿ ಮಾಡಿ ತೋರಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ಕೆರೆಯಂಗಳ ಹಾಗೂ ಶಾಲಾ ಕಾಲೇಜುಗಳ ಆವರಣದಲ್ಲಿ ಹೆಚ್ಚಿನ ಗಿಡಗಳನ್ನು ನೆಡಲಾಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಈ ಕೆಲಸ ಮಾಡುವುದರಿಂದ ಸ್ಥಳೀಯರಿಗೂ ಕೆಲಸ ಸಿಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಶ್ರೀನಿವಾಸ್ ತಿಳಿಸಿದರು.

ನರೇಗಾ ಯೋಜನೆಯನ್ನು ಬಳಸಿಕೊಂಡು ಅಭಿವೃದ್ಧಿಯ ಜತೆಗೆ ಪರಿಸರ ಉಳಿಸಿ‌ ಬೆಳೆಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನುಮ್‌ ತಿಳಿಸಿದರು.

ಧಾಮದ ಪ್ರವೇಶದಲ್ಲಿ ಸ್ವಾಗತ ಕಮಾನು‌ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ನೆಟ್ಟಿರುವ ಎಲ್ಲ ಜಾತಿಯ ಗಿಡಗಳ‌ ಹೆಸರನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲಾಗಿದೆ.

*

30 ವಿಧದ ಗಿಡಗಳು

ಹೊಸ ಉಪ್ಪಾರಹಳ್ಳಿ ಕೆರೆಯಂಗಳದಲ್ಲಿ ಅತ್ತಿ, ಅರಳಿ, ಆಲ, ಬೇವು, ನೇರಳೆ, ಹಲಸು, ಗುಲ್ ಮೊಹರ್, ನೆಲ್ಲಿ, ಹೊಂಗೆ, ಮಾವು, ಅಶೋಕ, ನಾಗಲಿಂಗಪುಷ್ಪ, ಟಬೂಬಿಯಾ, ಮತ್ತಿ, ಕಾಡುಬಾದಾಮಿ, ಗಸಗಸೆ, ಆರೆಂಜ್ ತುಲೀಪ್, ಪಾರಿಜಾತ, ಬಿದಿರು, ಹೂವರಸಿ, ಸಂಪಿಗೆ, ಗೋಣಿ, ಮಹಾಘನಿ, ಬಸವನ ಪಾದ, ಕೃಷ್ಣಾಚೂರ, ನೀರುಕಾಯಿ, ಹುಣಸೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಪೋಷಣೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು