ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸ ಇಮ್ಮಡಿ, ಕನಸುಗಳು ನೂರ್ಮಡಿ

ತಾಲ್ಲೂಕು ಆಡಳಿತ ಮತ್ತು ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ
Last Updated 28 ಆಗಸ್ಟ್ 2019, 14:19 IST
ಅಕ್ಷರ ಗಾತ್ರ

ಗೌರಿಬಿದನೂರು: ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ನೂರಾರು ವಿದ್ಯಾರ್ಥಿಗಳು, ಉದ್ಯೋಗಾವಕಾಶಗಳ ನಿರೀಕ್ಷೆಯಲ್ಲಿದ್ದವರೂ ಅಲ್ಲಿದ್ದರು. ಐಎಎಸ್‌, ಕೆಎಎಸ್‌ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆಯನ್ನು ತಿಳಿಯಲು ಕಾತರರಾಗಿ ಬಂದವರು ಸುಮಾರು ಮೂರು ಗಂಟೆಗಳ ಕಾಲ ತಾಳ್ಮೆಯ ವಶವಾಗಿ ಆತ್ಮವಿಶ್ವಾಸ ಇಮ್ಮಡಿಗೊಳಿಸಿಕೊಂಡರು.

ತಾಲ್ಲೂಕು ಆಡಳಿತದ ವತಿಯಿಂದ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ನಗರದ ಡಾ.ಎಚ್‌.ಎನ್.ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಕಂಡುಬಂದ ದೃಶ್ಯವಿದು.

ಗೌರಿಬಿದನೂರು ಹಾಗೂ ಸಮೀಪದ ಜಿಲ್ಲೆಗಳ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತ ಸಲಹೆ, ಮಾರ್ಗದರ್ಶನ ಪಡೆದರು. ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಕನಸುಗಳ ಸಾಕಾರಕ್ಕೆ ಕಾರ್ಯಾಗಾರ ನೀರೆರೆಯುವ ಜತೆಗೆ ಮೊಗದಲ್ಲಿ ಸಾರ್ಥಕತೆಯ ಭಾವ ಮೂಡಿಸಿತು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಮಾತನಾಡಿ, ‘ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ನಂತರ ಏನು ಮಾಡಬೇಕು ಎಂದು ಬಹುತೇಕ ವಿದ್ಯಾರ್ಥಿಗಳಲ್ಲಿ ಗೊಂದಲವಿರುತ್ತದೆ. ಅಂತಹ ಕವಲು ದಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಇಂತಹ ಕಾರ್ಯಾಗಾರ ಸಹಕಾರಿಯಾಗುತ್ತವೆ’ ಎಂದು ಹೇಳಿದರು.

‘ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಕನ್ನಡ ಮಾಧ್ಯಮದಲ್ಲಿಯೇ ಐಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಐಎಎಸ್‌ ಪರೀಕ್ಷೆ ಬರೀ ಕಾನ್ವೆಂಟ್‌, ನರ್ಸರಿಗಳಲ್ಲಿ ಓದಿದವರು ಮಾತ್ರ ಸೀಮಿತ ಎಂಬ ಭ್ರಮೆಯನ್ನು ವಿದ್ಯಾರ್ಥಿಗಳು ತೊಡೆದು ಹಾಕಿ ಉನ್ನತ ಗುರಿಗಳನ್ನು ಹೊಂದಿ ಅವುಗಳ ಸಾಕಾರಕ್ಕೆ ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಟಿ.ವಿಗಳನ್ನು ನೋಡುವುದರಿಂದ ಯಾವ ಜ್ಞಾನವೂ ಬರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಿನ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ದೇಶ, ವಿದೇಶಗಳ ಎಲ್ಲ ಆಗುಹೋಗುಗಳನ್ನು ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳಷ್ಟು ಚೆನ್ನಾಗಿ ಉಳಿದ ಯಾವ ಪತ್ರಿಕೆಗಳು ನೀಡುವುದಿಲ್ಲ. ಹಾಗಾಗಿ ನಾನು ಮೊದಲಿನಿಂದಲೂ ಈ ಪತ್ರಿಕೆಗಳ ಅಭಿಮಾನಿ’ ಎಂದರು.

ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ದಿನಪತ್ರಿಕೆಗಳ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ ಮಾತನಾಡಿ, ‘ದೈಹಿಕ, ಆಧ್ಯಾತ್ಮಿಕ, ಮಾನಸಿಕ ಬೆಳವಣಿಗೆ ಸಮತೋಲನದಲ್ಲಿ ಇದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ನಮ್ಮಲ್ಲಿ ಆಂತರಿಕ ಶುಚಿತ್ವ ಇದ್ದಾಗ ಮಾತ್ರ ನಾವು ಏನಾದರೂ ಸಾಧಿಸಬಹುದು. ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುತ್ತದೆ. ಅದನ್ನು ಅರಿತುಕೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕು’ ಎಂದು ಹೇಳಿದರು.

‘ಅನೇಕ ಪತ್ರಿಕೆಗಳು ಇವತ್ತು ರಾಜಕೀಯ, ಸಿನಿಮಾಗೆ ಸುದ್ದಿಗಳಿಗೆ ಸೀಮಿತವಾಗುತ್ತಿವೆ. ಆದರೆ ನಮ್ಮ ಉದ್ದೇಶ ಸದಾ ಶಿಕ್ಷಣಕ್ಕೆ ಒತ್ತು ನೀಡುವುದಾಗಿದೆ. ಜಗತ್ತು ಇವತ್ತು ಸಾಕಷ್ಟು ಬದಲಾಗಿದೆ. ಮುಂದಿನ ಸುಮಾರು 20–30 ವರ್ಷದ ಮುಂದೇನು ಏನು ಎಂಬುದು ನಾವು ಈಗಲೇ ಸಂಶೋಧನೆ ಮಾಡಲು ಆರಂಭಿಸಿದ್ದೇವೆ. ಪೋಷಕರು ಹೇಳದ, ಶಿಕ್ಷಕರು ಕಲಿಸದ, ಶಿಕ್ಷಕರು ಹೇಳದ, ಟಿ.ವಿ ಮಾಧ್ಯಮಗಳು ತೋರಿಸದಂತಹದ್ದನ್ನು ನಾವು ನೀಡುವ ಸಂಕಲ್ಪ ಮಾಡಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಎ.ಅರುಂಧತಿ, ಮುಖಂಡರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ಎಚ್.ಎನ್.ಪ್ರಕಾಶರೆಡ್ಡಿ, ಲಯನ್ಸ್ ಗೌರಿಬಿದನೂರು ಘಟಕದ ಅಧ್ಯಕ್ಷ ಪ್ರೊ.ಕೆ.ರಾಮಾಂಜನೇಯಲು, ತಹಶೀಲ್ದಾರ್ ಎಚ್.ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎನ್.ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರಾಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಶಿವಣ್ಣ, ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ದಿನಪತ್ರಿಕೆಗಳ ಪ್ರಸರಣ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಜೋಯಿಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT