ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ಹಾವಳಿ: ಗುಡಿಹಳ್ಳಿ ಕೆರೆ ಹಾಳು

Published 9 ಮಾರ್ಚ್ 2024, 14:15 IST
Last Updated 9 ಮಾರ್ಚ್ 2024, 14:15 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಗುಡಿಹಳ್ಳಿ ಕೆರೆಯ ಕಟ್ಟೆ ಮತ್ತು ತೂಬಿನ ಸುತ್ತಮುತ್ತಲಿನ ಸ್ಥಳ ಸಂಜೆ ವೇಳೆ ಕುಡುಕರ ತಾಣವಾಗುತ್ತಿದೆ.

ಕೆರೆಯ ಕಟ್ಟೆಯ ಮೇಲೆ ಮದ್ಯದ ಅಂಗಡಿಯಲ್ಲಿರುವಂತೆ ಖಾಲಿ ಬಾಟಲು ಜೋಡಿಸಿಟ್ಟಿರುತ್ತಾರೆ. ಈ ಭಾಗದಲ್ಲೆಲ್ಲಾ ಮದ್ಯದ ಖಾಲಿ ಬಾಟಲು, ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಲೋಟ, ತಟ್ಟೆ, ಕವರ್‌, ತಿಂದು ಬಿಸಾಡಿದ ತ್ಯಾಜ್ಯ ಕಂಡುಬರುತ್ತದೆ. ಒಡೆದಿರುವ ಖಾಲಿ ಗಾಜಿನ ಬಾಟಲುಗಳು ಕೆರೆಯ ದಂಡೆಯನ್ನೆಲ್ಲಾ ಆವರಿಸಿವೆ.

ಗುಡಿಹಳ್ಳಿ ಕೆರೆಯ ಕೋಡಿಯು ಗುಡಿಹಳ್ಳಿ ಗ್ರಾಮದ ಬಳಿ ಇದ್ದು ಕೋಡಿ ಹರಿದರೆ ಆ ನೀರು ಶಿಡ್ಲಘಟ್ಟದ ಅಮ್ಮನಕೆರೆಗೆ ಹರಿಯುತ್ತದೆ. ಎಚ್.ಎನ್ ವ್ಯಾಲಿ ನೀರು ತಾಲ್ಲೂಕಿನಲ್ಲಿ ಮೊಟ್ಟಮೊದಲು ಬಂದಿದ್ದೇ ಗುಡಿಹಳ್ಳಿ ಕೆರೆಗೆ. ತಾಲ್ಲೂಕಿನಲ್ಲಿ ಬಹುತೇಕ ಕೆರೆಗಳು ಒಣಗಿದ್ದರೂ ಗುಡಿಹಳ್ಳಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರಿದೆ. ಸುತ್ತಮುತ್ತಲಿನ ಕೊಳವೆಬಾವಿ ಹಾಗೂ ಕೆರೆ ಅಚ್ಚುಕಟ್ಟುದಾರರಿಗೆ ಇದು ಸಂತಸದ ಸಂಗತಿ.

2021ರ ಅಕ್ಟೋಬರ್ ತಿಂಗಳಿನಲ್ಲಿ ಬಿದ್ದ ಮಳೆಗೆ ತಾಲ್ಲೂಕಿನ ಗುಡಿಹಳ್ಳಿ ಕೆರೆಯು ತುಂಬಿಹೋಗಿ ಕೋಡಿ ಹರಿದಿತ್ತು. ಸುಮಾರು 33 ವರ್ಷಗಳ ನಂತರ ಅದು ಕೋಡಿ ಹರಿದಿತ್ತು.

ಆದರೆ ಕೆರೆ ಈಗ ಕುಡುಕರ ಹಾವಳಿಗೆ ತುತ್ತಾಗಿದೆ. ಕುಡುಕರ ತ್ಯಾಜ್ಯ ಸುರಿಯುವ ತಾಣವಾಗಿದೆ. ಕೆರೆಯ ಕಟ್ಟೆ ಮದ್ಯವ್ಯಸನಿಗಳ ಅಡ್ಡೆಯಾಗಿದೆ.

ಇದರಿಂದಾಗಿ ಸಂಜೆಯ ನಂತರ ಗ್ರಾಮಕ್ಕೆ ಬರುವವರಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಸಾಕಷ್ಟು ಕಿರುಕುಳ ತೊಂದರೆಯುಂಟಾಗುತ್ತಿದೆ. ಕೆರೆಯಲ್ಲಿ ಜಾನುವಾರು ಶುಚಿಗೊಳಿಸಲು ಹಾಗೂ ಕೆಲವು ಪೂಜೆ ಪುನಸ್ಕಾರಗಳಿಗೆ ಹೋಗದಂತಾಗಿದೆ. ಇಲ್ಲಿ ಬಿದ್ದಿರುವ ಗಾಜಿನ ಚೂರುಗಳು ಅಪಾಯಕಾರಿಯಾಗಿವೆ.

ಗುಡಿಹಳ್ಳಿ ಗ್ರಾಮದವರಿಗಿಂತ ಹೊರಗಿನವರು ಇಲ್ಲಿ ಬಂದು ಮದ್ಯ ಸೇವಿಸುತ್ತಾರೆ. ಇದಕ್ಕೆಲ್ಲಾ ಕಾರಣ ಅಬ್ಲೂಡಿನಲ್ಲಿರುವ ಮದ್ಯದ ಮಳಿಗೆ. ಒಂದೆಡೆ ಗ್ರಾಮದ ಸ್ವಾಸ್ಥ್ಯ ಹಾಳು ಮತ್ತೊಂದೆಡೆ ಕಲುಶಿತಗೊಳ್ಳುತ್ತಿದೆ ಗ್ರಾಮದ ಕೆರೆ.

ರೈತ ಸಂಘದ ಸತತ ಹೋರಾಟದ ಫಲವಾಗಿ ಗುಡಿಹಳ್ಳಿ ಕೆರೆಗೆ ನೀರು ಬಂತು. ಕುಡುಕರು ಬಂದು ಕೆರೆಯ ಕಟ್ಟೆಯ ಮೇಲೆ ರಾತ್ರಿ ಹನ್ನೊಂದಾದರೂ ಕುಡಿಯುತ್ತಿರುತ್ತಾರೆ. ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು.
–ಜಿ.ಎಂ.ಕೆಂಪಣ್ಣ, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ
ಎಚ್.ಎನ್.ವ್ಯಾಲಿ ನೀರು ಕೆರೆಗೆ ಬಂದು ಈ ಭಾಗದ ಅಂತರ್ಜಲ ಹೆಚ್ಚಿಸಿತು. ದುಃಖದ ಸಂಗತಿಯೆಂದರೆ ಕುಡುಕರಿಂದಾಗಿ ಕೆರೆ ಹಾಳಾಗುತ್ತಿದೆ. ಕೆರೆ ಬಳಿ ಜನರು ಸುಳಿಯದಂತಾಗಿದೆ. ಕುಡುಕರ ಕಿರುಕುಳವೂ ಹೆಚ್ಚಾಗಿದೆ.
– ಜಿ.ಎಸ್.ಮಂಜುನಾಥ್, ಗುಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT