ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಮೈದುಂಬಿದ ನದಿ, ಜಲದಿಗ್ಬಂಧನ

Last Updated 20 ನವೆಂಬರ್ 2021, 6:54 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನಾದ್ಯಂತ ಗುರುವಾರ ಇಡೀ ರಾತ್ರಿ ಉತ್ತಮ ಮಳೆ ಸುರಿದ ಪರಿಣಾಮವಾಗಿ ಜಲಮೂಲಗಳು ತುಂಬಿ ನದಿ ನಾಲೆ, ಹಳ್ಳ ಕೊಳ್ಳಗಳು ಮೈದುಂಬಿ‌ ‌ಹರಿಯುತ್ತಿದೆ. ದಶಕಗಳ‌ ಬಳಿಕ ಸುರಿದ ದಾಖಲೆ ಮಳೆಗೆ ಜನ ತತ್ತರಿಸಿದ್ದು, ಜನ ಜಾನುವಾರುಗಳು ಸಂಕಷ್ಟದಲ್ಲೆ ದಿನದೂಡುವ ಸ್ಥಿತಿ
ನಿರ್ಮಾಣವಾಗಿದೆ.

ಕಂದಾಯ ಇಲಾಖೆಯ ಮಾಹಿತಿಯ ಪ್ರಕಾರ, ಗುರುವಾರ ಬೆಳಿಗ್ಗೆ 8ರಿಂದ ಶುಕ್ರವಾರ‌ ಬೆಳಿಗ್ಗೆ 8ರವರೆಗೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಸುರಿದ ಮಳೆಯ ಪ್ರಮಾಣ: ಗೌರಿಬಿದನೂರು ನಗರ 93 ಮಿ.ಮೀ, ಹೊಸೂರು 34.2 ಮಿ.ಮೀ, ಡಿ.ಪಾಳ್ಯ 105 ಮಿ.ಮೀ, ವಾಟದಹೊಸಹಳ್ಳಿ 126 ಮಿ.ಮೀ, ಮಂಚೇನಹಳ್ಳಿ 68 ಮಿ.ಮೀ, ತೊಂಡೇಬಾವಿ 95 ಮಿ.ಮೀ, ತಿಪ್ಪಗಾನಹಳ್ಳಿ 46.8 ಮಿ.ಮೀ ಸೇರಿದಂತೆ ಒಟ್ಟು 568.2 ಮಿ.ಮೀ ನಷ್ಟು ಮಳೆಯಾಗಿದೆ.

ಮಂಚೇನಹಳ್ಳಿ ಹೋಬಳಿಯ ಮಿನಕನಗುರ್ಕಿಯಲ್ಲಿ ಮಳೆಯ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು, ಓರ್ವ ಮಹಿಳೆ ಗಾಯಗೊಂಡು ಬೆಂಗಳೂರಿನ ‌ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಚೇನಹಳ್ಳಿ‌ ಬಳಿ ಉತ್ತರ ಪಿನಾಕಿನಿ ನದಿ ರಭಸವಾಗಿ ಹರಿಯುತ್ತಿರುವ ಕಾರಣ ಸಮೀಪದ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿದೆ. ಮಂಚೇನಹಳ್ಳಿಯಿಂದ ತೊಂಡೇಬಾವಿಗೆ ಸಂಪರ್ಕ ‌ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

‌ಗಂಗಸಂದ್ರ ಗ್ರಾ.ಪಂ ವ್ಯಾಪ್ತಿಯ ಸಾಗಾನಹಳ್ಳಿ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿನ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಪಿಡಿಒ ಎಲ್.ರೂಪಾ ಹಾಗೂ ಸಿಬ್ಬಂದಿ ಸ್ಥಳಪರಿಶೀಲನೆ ನಡೆಸಿ ನಿರಾಶ್ರಿತರ ಕುಟುಂಬಗಳಿಗೆ ತಾತ್ಕಾಲಿಕವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೇ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಮುದುಗಾನಕುಂಟೆ ಗಂಗಾಭಾಗೀರಥಿ ದೇವಸ್ಥಾನ‌ ಹಾಗೂ ಪ್ರಾಂಗಣವು ಕೆರೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.

ನಗರದ ಸಮೀಪದಲ್ಲಿ ಹರಿಯುವ ಪಿನಾಕಿನಿ ‌ನದಿಯು ಶುಕ್ರವಾರ ಬೆಳಗಿನ ಜಾವ ರಭಸವಾಗಿ ಹರಿಯಲು ಆರಂಭವಾದ ಕಾರಣ ನಗರಸಭೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಸೇತುವೆ ಬಂದ್ ಮಾಡಿದ್ದಾರೆ. ಬೈಪಾಸ್ ರಸ್ತೆಯ ಬಳಿ ಮೂಗಿನ ಹಳ್ಳ ಮೈದುಂಬಿ‌ ‌ಹರಿದ ಪರಿಣಾಮವಾಗಿ ಗೊಟಕನಾಪುರ, ಪುಟ್ಟಾಪುರ್ಲಹಳ್ಳಿ ಹಾಗೂ‌ ಗಂಗಸಂದ್ರ ಗ್ರಾಮಗಳಿಗೆ ಜಲದಿಗ್ಬಂಧನ ಏರ್ಪಟ್ಟ‌ ಪರಿಣಾಮ ಕೆಲ ಗಂಟೆಗಳ‌ ಕಾಲ ಜನತೆ ನಗರಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.

‌ತಾಲ್ಲೂಕಿನ ಮೇಳ್ಯ ಕೆರೆಯು ತುಂಬಿ ಅಪಾಯದ ಅಂಚಿನಲ್ಲಿದ್ದು ಶುಕ್ರವಾರ ‌ಬೆಳಿಗ್ಗೆ ನೀರಿನ‌ ಒಳ ಹರಿವು ಹೆಚ್ಚಾದ ಕಾರಣ ಕೆರೆಯ ಕಟ್ಟೆ ಒಡೆದು ಸಮೀಪದ ರೈತರ ಜಮೀನುಗಳಲ್ಲಿ ‌ನೀರು‌ ಹರಿದ ಪರಿಣಾಮ ಸಾಕಷ್ಟು ಬೆಳೆಯು‌ ನೀರಿನಲ್ಲಿ ಕೊಚ್ಚಿ ಹೋಗಿದೆ. ಸ್ಥಳಕ್ಕೆ ತಹಶೀಲ್ದಾರ್ ಎಚ್.ಶ್ರೀನಿವಾಸ್ ಭೇಟಿ‌ ನೀಡಿದರು.

ಕಾದಲವೇಣಿ, ರಮಾಪುರ‌ ಮತ್ತು ಇಡಗೂರು ಗ್ರಾ.ಪಂ ವ್ಯಾಪ್ತಿಯಲ್ಲಿನ ಗ್ರಾಮದ ಜನತೆಗೆ ಜಲದಿಗ್ಬಂಧನ ಏರ್ಪಟ್ಟಿದ್ದು ಶುಕ್ರವಾರ ಸಂಜೆಯವರೆಗೆ ಗ್ರಾಮಗಳಿಂದ ಹೊರ ಬರದಂತಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT