ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಪರಿಷತ್ ಸದಸ್ಯರಾದ ಸೀತಾರಾಂ, ಅನಿಲ್‌ ಮತ ಎಣಿಕೆಗೆ ಹೈಕೋರ್ಟ್ ತಡೆ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ
Published : 11 ಸೆಪ್ಟೆಂಬರ್ 2024, 17:07 IST
Last Updated : 11 ಸೆಪ್ಟೆಂಬರ್ 2024, 17:07 IST
ಫಾಲೋ ಮಾಡಿ
Comments

ಬೆಂಗಳೂರು: ‘ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳಿಗೆ ಇದೇ 12ರಂದು (ಗುರುವಾರ) ನಡೆಯಲಿರುವ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾದ ಎಂ.ಆರ್.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್‌ ಅವರು ಮತದಾನ ಮಾಡಬಹುದು. ಆದರೆ, ಅವರ ಮತಗಳನ್ನು ಎಣಿಕೆ ಮಾಡದೆ ಅಮಾನತಿನಲ್ಲಿ ಇರಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಎಂ.ಆರ್.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್ ಅವರ ಮತದಾನ ಆಕ್ಷೇಪಿಸಿ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಡಿ.ಎಸ್‌.ಆನಂದ ರೆಡ್ಡಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ನಾಮನಿರ್ದೇಶಿತ ಸದಸ್ಯರು ಇಂತಹ ಸಂದರ್ಭದಲ್ಲಿ ಮತದಾನ ಮಾಡಬಹುದೇ ಎಂಬುದು ವಿವಾದಿತ ವಿಚಾರ ಆಗಿರುವ ಕಾರಣ ಪ್ರತಿವಾದಿಗಳಿಬ್ಬರೂ ಗುರುವಾರದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಬಹುದು. ಆದರೆ, ಇವರ ಮತಗಳನ್ನು ಎಣಿಕೆ ಮಾಡದೆ ಅಮಾನತಿನಲ್ಲಿ ಇರಿಸಬೇಕು. ಈ ಮಧ್ಯಂತರ ಆದೇಶವು ರಿಟ್‌ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ, ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ, ಎಂ.ಆರ್.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಆಕ್ಷೇಪಣೆ ಏನು?
‘ಎಂ.ಆರ್‌.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್ ನಗರಸಭೆಯ ಸದಸ್ಯರಲ್ಲ. ಇವರಿಬ್ಬರೂ ನಾಮನಿರ್ದೇಶಿತ ಸದಸ್ಯರು. ಅಂತೆಯೇ, ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯ ವಿಳಾಸ ತೋರಿಸುವ ಮೂಲಕ ಇಲ್ಲಿನ ನಿವಾಸಿಗಳು ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇವರು ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಗಳಲ್ಲ. ಕಾನೂನುಬಾಹಿರವಾಗಿ ಉಪವಿಭಾಗಾಧಿಕಾರಿ ಇವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಹಾಗಾಗಿ, ಸಂವಿಧಾನದ 243 (ಆರ್‌)(2)(ಎ)(1)ನೇ ವಿಧಿಯ ಅನುಸಾರ ಅವರಿಗೆ ಮತದಾನ ಮಾಡುವ ಹಕ್ಕಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ಎಸ್‌.ಎನ್‌.ಚನ್ನಬಸಪ್ಪ ಮತ್ತು ಎಸ್‌.ಹೊನ್ನಪ್ಪ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT