ಮಂಗಳವಾರ, ಜೂನ್ 28, 2022
28 °C
ಸುಂಡ್ರಹಳ್ಳಿ ಕೇಂದ್ರಕ್ಕೆ ದಾಖಲಾಗಲು ದುಂಬಾಲು

ಕೋವಿಡ್ ಕೇರ್ ಸೆಂಟರ್‌ಗೆ ಹೈಟೆಕ್‌ ಸ್ಪರ್ಶ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‌ ಮಾಡಲಾಗಿದೆ. ಕೊಂಡಪ್ಪಗಾರಹಳ್ಳಿ, ಹನ್ನೊಂದನೇ ಮೈಲಿ ಮತ್ತು ಸುಂಡ್ರಹಳ್ಳಿಯ ವಸತಿ ಶಾಲೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಆದರೆ ಹೆಚ್ಚಿನ ಸೋಂಕಿತರು ಸುಂಡ್ರಹಳ್ಳಿಯ ಕೇಂದ್ರಕ್ಕೇ ತಮ್ಮನ್ನು ಕರೆದುಕೊಂಡು ಹೋಗಿ ಬಿಡಿ ಎಂದು ದುಂಬಾಲು ಬೀಳುತ್ತಿದ್ದಾರೆ.

ಸುಂಡ್ರಹಳ್ಳಿಯ ಕೋವಿಡ್ ಕೇರ್ ಸೆಂಟರಿನಲ್ಲಿರುವ ಹಲವಾರು ವಿಶಿಷ್ಟತೆಗಳೇ ಇದಕ್ಕೆ ಕಾರಣ. ತಾಲ್ಲೂಕಿನಲ್ಲಿ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕೋವಿಡ್ ಕೇರ್ ಸೆಂಟರ್ ಇದು. ತಾಲ್ಲೂಕು ಆಡಳಿತದ ಅನುಮತಿಯೊಂದಿಗೆ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯವರು, ಎಸಿಐ ವರ್ಲ್ಡ್ ವೈಡ್ ಸಂಸ್ಥೆಯ ನೆರವಿನೊಂದಿಗೆ ಸಂಪೂರ್ಣ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಸುಂಡ್ರಹಳ್ಳಿಯ ಕೋವಿಡ್ ಸೆಂಟರನ್ನು ಅತ್ಯುತ್ತಮವಾಗಿ ಹೈಟೆಕ್ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಸರ್ಕಾರದ ಉತ್ತಮ ವೈದ್ಯಕೀಯ ನೆರವಿನ ಜೊತೆಗೆ ಬಿ.ಎಂ.ವಿ ವಿದ್ಯಾಸಂಸ್ಥೆಯವರು ಪೌಷ್ಟಿಕ ಆಹಾರ ನೀಡುತ್ತಾ, ಶುಚಿತ್ವದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಇದುವರೆಗೂ 256 ಮಂದಿ ಈ ಸೆಂಟರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 170 ಮಂದಿ ಸಂಪೂರ್ಣ ಗುಣಹೊಂದಿ ಮನೆಗಳಿಗೆ ತೆರಳಿದ್ದಾರೆ. ಪ್ರಸ್ತುತ 86 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕೋವಿಡ್ ಕೇರ್ ಸೆಂಟರಿನ ನಿರ್ವಹಣೆಯ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ವಹಿಸಿಕೊಂಡಾಗ ಆಧುನಿಕ ಮತ್ತು ಅವಶ್ಯಕ ವಸ್ತುಗಳನ್ನು ಮೊದಲು ಅಲ್ಲಿ ಅಳವಡಿಸಿದೆವು. ಮಂಚಗಳು, ಹಾಸಿಗೆಗಳು, ಒಂದೇ ರೀತಿಯ ಬೆಡ್ ಶೀಟ್ ಮತ್ತು ದಿಂಬಿನ ಕವರುಗಳು, ವಾಟರ್ ಹೀಟರ್, ನೀರು ಶುದ್ಧೀಕರಣ ಯಂತ್ರ, ಬಿಸಿ ನೀರು ಕುಡಿಯುವವರಿಗಾಗಿ ವಾಟರ್ ಡಿಸ್ಪೆನ್ಸರ್ ಯಂತ್ರಗಳು, ಸ್ಯಾನಿಟೈಸಿಂಗ್ ಯಂತ್ರಗಳು, ಕಸದ ಬುಟ್ಟಿಗಳು, ಅವಶ್ಯಕ ಔಷಧಿಗಳು, ಶುಚಿತ್ವವನ್ನು ಕಾಪಾಡಲು ಡಿಟರ್ಜೆಂಟ್ ಗಳು, ಪೆನಾಯಿಲ್ ಗಳ ಬ್ಯಾರಲ್ ಗಳು, ಮಾಸ್ಕ್ ಗಳು, ಪಿಪಿಇ ಕಿಟ್ ಗಳು, ನೆಬ್ಯುಲೈಜರ್, ಪೌಷ್ಟಿಕ ಆಹಾರ, ಹಣ್ಣುಗಳನ್ನು ನೀಡುತ್ತಿದ್ದೇವೆ’ ಎಂದು ಬಿ.ಎಂ.ವಿ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.

‘ಏಳು ಮಂದಿ ನಮ್ಮ ಶಾಲೆಯ ಸಿಬ್ಬಂದಿಯನ್ನು ಅಲ್ಲಿ ಕೆಲಸ ಮಾಡಲು ನಿಯೋಜಿಸಿದ್ದು ಅವರಿಗೆ ವೇತನ ಸಹ ನೀಡುತ್ತಿದ್ದೇವೆ. ಸರ್ಕಾರಿ ವೈದ್ಯೆ ಅಂಬಿಕಾ ನೇತೃತ್ವದ ತಂಡದಿಂದ ಇಲ್ಲಿನ ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ಸಿಗುತ್ತಿದೆ. ಸೋಂಕಿತರಿಗೆ ಮನರಂಜನೆಗಾಗಿ ಟಿ ವಿ ಕೊಡಲಿದ್ದೇವೆ. ನಮ್ಮ ವಿದ್ಯಾಸಂಸ್ಥೆಯ ಹಲವಾರು ಪೀಠೋಪಕರಣಗಳನ್ನು ಇಲ್ಲಿ ತಂದಿರಿಸಿದ್ದೇವೆ. ಇಲ್ಲಿ ನೂರು ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಒಳಗಿರುವ ಸೋಂಕಿತರು, ವೈದ್ಯರು ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಸೂಚಿಸಿದಾಗ ನಮಗೆ ಸಾರ್ಥಕ ಭಾವ ಮೂಡುತ್ತಿದೆ’ ಎಂದರು.

‘ಗ್ರಾಮಾಂತರ ಪ್ರದೇಶದ ಸೋಂಕಿತ
ರಿಗೆ ನಗರದವರಿಗೆ ಸಿಗುವಂತಹ ಅತ್ಯು
ತ್ತಮ ಚಿಕಿತ್ಸೆ ಸಿಗಬೇಕೆನ್ನುವ ಕಾಳಜಿಯಿಂದ ತಹಶೀಲ್ದಾರ್ ರಾಜೀವ್ ಅವರನ್ನು ಸಂಪರ್ಕಿಸಿದಾಗ ಸುಂಡ್ರಹಳ್ಳಿಯ ಕೋವಿಡ್ ಕೇರ್ ಸೆಂಟರಿನ ನಿರ್ವಹಣೆಗೆ ತಕ್ಷಣವೇ ಅನುಮತಿ ನೀಡಿದರು. ಎಸಿಐ ವರ್ಲ್ಡ್ ವೈಡ್ ಸಂಸ್ಥೆಯವರು ಆರ್ಥಿಕ ನೆರವು ನೀಡಿದ್ದಾರೆ. ಸಂಸ್ಥೆಯ ಟ್ರಸ್ಟಿ ಎಸ್.ನಾರಾಯಣಸ್ವಾಮಿ ಇಲ್ಲಿ ಊಟ ಮಾಡಿ, ಸೋಂಕಿತರಿಗೆ ಏನಾದರೂ ತೊಂದರೆಗಳಿವೆಯಾ, ಊಟ ಹೇಗಿದೆ ಎಂಬುದಾಗಿ ವಿಚಾರಿಸುತ್ತಿರುತ್ತಾರೆ. ಅಮೋಘವರ್ಷ ಮತ್ತು ಸಿರಿ ಶೆಟ್ಟಿ ಎರಡು ದಿನಕ್ಕೊಮ್ಮೆ ಸೆಂಟರಿಗೆ ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ತರುತ್ತಿರುತ್ತಾರೆ’ ಎಂದು ಅವರು ವಿವರಿಸಿದರು.

‘ಇಲ್ಲಿ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಎಂದರೆ, ಗುಣ ಹೊಂದಿದ ಸೋಂಕಿತರನ್ನು ಮನೆಗೆ ಹೋಗಿ ಎಂದರೆ ಇನ್ನೊಂದೆರಡು ದಿನ ಇರ್ತೀವಿ ಮೇಡಂ ಎನ್ನುತ್ತಿದ್ದಾರೆ. ದೇಹಕ್ಕಷ್ಟೇ ಅಲ್ಲದೆ ಸೋಂಕಿತರಿಗೆ ಮನೋಸ್ಥೈರ್ಯ ತುಂಬಲು, ಮನರಂಜನೆ, ಆಪ್ತ ಸಮಾಲೋಚನೆ, ಯೋಗಾಭ್ಯಾಸ ಮುಂತಾದವುಗಳ ಮೂಲಕ ಮಾನಸಿಕವಾಗಿ ರೋಗವನ್ನು ಎದುರಿಸಲು ಎಲ್ಲಾ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ’ ಎನ್ನುತ್ತಾರೆ ಡಾ.ಅಂಬಿಕಾ.

‘ಇಲ್ಲಿನ ಸುವ್ಯವಸ್ಥೆಯನ್ನು ಕಂಡು ನಾವೆಲ್ಲೋ ಹೈಟೆಕ್ ಆಸ್ಪತ್ರೆಯಲ್ಲಿದ್ದಂತೆ ಭಾಸವಾಗುತ್ತಿದೆ. ಒಳ್ಳೆ ಊಟ, ಚಿಕಿತ್ಸೆ, ಆಟ, ಯೋಗ, ವಾಕಿಂಗ್, ಶುಚಿತ್ವ ಮುಂತಾದವುಗಳಿಂದ ಸಮಯ ಹೋಗುವುದೇ ಗೊತ್ತಾಗುತ್ತಿಲ್ಲ. ಇಲ್ಲೇ ಇದ್ದುಬಿಡೋಣ ಎನ್ನಿಸುತ್ತದೆ’ ಎಂದು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.