ಗುರುವಾರ , ನವೆಂಬರ್ 21, 2019
23 °C
ಈರುಳ್ಳಿ ಬೆಲೆ ತಹಬದಿಗೆ ಬಂದರೂ ಸಂತಸಗೊಳ್ಳದ ಗ್ರಾಹಕರು, ನೆರೆಯಿಂದಾಗಿ ಬೆಳೆಗಳಿಗೆ ಅಪಾರ ಹಾನಿಯಾಗಿ ಏಕಾಏಕಿ ಏರಿದ ಧಾರಣೆ

ಬೆಳ್ಳುಳ್ಳಿ ಘಾಟು ಹೆಚ್ಚಿಸಿದ ಬೆಲೆ

Published:
Updated:
Prajavani

ಚಿಕ್ಕಬಳ್ಳಾಪುರ: ಕಳೆದ ತಿಂಗಳು ಬೆಲೆ ಏರಿಕೆಯಿಂದ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತಹಬದಿಗೆ ಬಂತು ಎನ್ನುವ ಹೊತ್ತಿನಲ್ಲಿಯೇ, ಈಗ ಬೆಳ್ಳುಳ್ಳಿ ಬೆಲೆ ಗಗನಮುಖಿಯಾಗಿ ಗ್ರಾಹಕರಿಗೆ ಮತ್ತು ಹೋಟೆಲ್ ಮಾಲೀಕರಿಗೆ ಅಶ್ರುಧಾರೆ ತರಿಸುತ್ತಿದೆ.

ತಿಂಗಳ ಹಿಂದಷ್ಟೇ ಒಂದು ಕೆ.ಜಿ.ಗೆ ₹100 ರಿಂದ ₹120ರ ಆಸುಪಾಸಿನಲ್ಲಿದ್ದ ಬೆಳ್ಳುಳ್ಳಿ ಬೆಲೆ, ನೆರೆ, ಪ್ರವಾಹದಿಂದ ಬೆಳೆ ಹಾನಿಯ ಬೆನ್ನಲ್ಲೇ ದುಪ್ಪಟ್ಟಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೆಳ್ಳುಳ್ಳಿ ₹200 ರಿಂದ ₹220ರ ವರೆಗೆ ಮಾರಾಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಏರುಗತಿಯಲ್ಲಿ ಸಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.

ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ದರ್ಜೆ ಬೆಳ್ಳುಳ್ಳಿ ಕೆ.ಜಿ.ಗೆ ₹150 ರಿಂದ ₹180ರ ವರೆಗೆ ಮಾರಾಟ ಮಾಡಲಾಗುತ್ತಿದೆ. ನಿಂಬೆ ಹಣ್ಣಿನ ಗಾತ್ರದ ಬೆಳ್ಳುಳ್ಳಿ ಗಡ್ಡೆಗಳು ಕೆ.ಜಿ.ಗೆ ₹180ರಂತೆ ಬಿಕರಿಯಾಗುತ್ತಿದೆ. ಗಗನಮುಖಿಯಾಗಿದ್ದ ಈರುಳ್ಳಿ ಬೆಲೆ ಕೇಂದ್ರ ಸರ್ಕಾರ ರಪ್ತು ನಿಷೇಧ ಹೇರಿದ ಬಳಿಕ ಸಹಜ ಸ್ಥಿತಿಗೆ ಬಂದ ಗ್ರಾಹಕರಲ್ಲಿ ನೆಮ್ಮದಿಯ ನಿಟ್ಟುಸಿರು ತಂದರೆ, ಬೆಲೆ ಹೆಚ್ಚಳದಿಂದಾಗಿ ಈಗ ಬೆಳ್ಳುಳ್ಳಿ ಘಾಟು ಹೆಚ್ಚಿಸಿದೆ.

ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಮುಖ್ಯವಾಗಿ ಮಹಾರಾಷ್ಟ್ರ, ಸೊಲ್ಲಾಪುರ, ಪುಣೆ ಮಾರುಕಟ್ಟೆಯಿಂದ ಬೆಳ್ಳುಳ್ಳಿ ಆವಕವಾಗುತ್ತದೆ. ಜಿಲ್ಲೆಯಲ್ಲಿ ಬೆಳ್ಳುಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಹೀಗಾಗಿ, ನಗರದ ವರ್ತಕರು ಬೆಳ್ಳುಳ್ಳಿಗಾಗಿ ಹೊರಗಿನ ಮಾರುಕಟ್ಟೆಯನ್ನು ಎದುರು ನೋಡಬೇಕಾದ ಸ್ಥಿತಿ ಇದೆ.

‘ದೇಶಕ್ಕೆ ಬೇಕಾಗುವ ಒಟ್ಟಾರೆ ಈರುಳ್ಳಿ, ಬೆಳ್ಳುಳ್ಳಿಯ ಶೇ 50ರಷ್ಟನ್ನು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಬೆಳೆಯಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ನೂರಾರು ಎಕರೆ ಪ್ರದೇಶದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿದೆ. ಹೀಗಾಗಿ, ಬೆಳ್ಳುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿಲ್ಲ’ ಎಂದು ನಗರದ ಬೆಳ್ಳುಳ್ಳಿ ವ್ಯಾಪಾರಿ ಅಹಮ್ಮದ್ ತಿಳಿಸಿದರು.

‘ಪ್ರತಿಯೊಂದು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮುಖ್ಯ ತರಕಾರಿಗಳು. ಇವುಗಳನ್ನು ಬಳಸದೆ ಸ್ವಾದಿಷ್ಟ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಎಷ್ಟೇ ಬೆಲೆ ಏರಿಕೆಯಾದರೂ ಈ ಎರಡು ಪದಾರ್ಥಗಳನ್ನು ಸ್ವಲ್ಪಮಟ್ಟಿಗಾದರೂ ಖರೀದಿಸಲೇ ಬೇಕಾಗುತ್ತದೆ. ಬೆಲೆ ಕಡಿಮೆಯಾಗಿದ್ದ ಹೆಚ್ಚು ಕೊಳ್ಳುತ್ತಿದ್ದೆವು. ಈಗ ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತೇವೆ’ ಎಂದು ಎಚ್‌.ಎಸ್.ಗಾರ್ಡನ್ ನಿವಾಸಿ ಆಶಾ ಹೇಳಿದರು.

‘ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆ ಆಯಿತು ಎನ್ನುವಷ್ಟರಲ್ಲಿ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ. ಜತೆಗೆ ಶುಂಠಿ ಬೆಲೆ ಕೂಡ ವಿಪರೀತವಾಗಿ ಏರಿಕೆಯಾಗಿದೆ. ಹಾಗಂತ ನಾವು ಏಕಾಏಕಿ ಆಹಾರ ಪದಾರ್ಥಗಳು, ಖಾದ್ಯಗಳ ಬೆಲೆ ಏರಿಸಲು ಆಗುವುದಿಲ್ಲ. ಇದರಿಂದ ಹೋಟೆಲ್‌ ಮಾಲೀಕರ ಖರ್ಚು ಹೆಚ್ಚಾಗುತ್ತಿದೆ’ ಎಂದು ಚದಲಪುರದ ಎಚ್‌ಕೆಜಿಎನ್ ಹೋಟೆಲ್ ಮಾಲೀಕ ಫೈಯಾಜ್ ತಿಳಿಸಿದರು.

ಪ್ರತಿಕ್ರಿಯಿಸಿ (+)