ಬುಧವಾರ, ಏಪ್ರಿಲ್ 14, 2021
25 °C
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಬಿಸಿಯೂಟ ಬಲಪಡಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಯೂಟ ತಯಾರಿಕೆ ಸಿಬ್ಬಂದಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳವನ್ನು ಪ್ರತಿಭಟನಕಾರರು ಖಂಡಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ನೂತನ ಶಿಕ್ಷಣ ನೀತಿ ಜಾರಿಗೊಳಿಸುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಗೊಳಿಸಬೇಕು. ಯೋಜನೆಯನ್ನು ಈಗಿರುವ ಮಾದರಿಯಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

2020–21ರಲ್ಲಿ ಬಿಸಿಯೂಟ ಯೋಜನೆಗೆ ₹ 12,900 ಕೋಟಿ ಖರ್ಚಾಗಿತ್ತು. 2021–22ರಲ್ಲಿ ₹ 1,400 ಕೋಟಿಯನ್ನು ಕಡಿತ ಮಾಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರ 2010ರಿಂದ ನೌಕರರ ಸಂಭಾವನೆ ಹೆಚ್ಚಿಸಿಲ್ಲ. ಎಲ್ಲ ದಿನಬಳಕೆ ವಸ್ತುಗಳ ಬೆಲೆಗಳು ಹೆಚ್ಚಿದ್ದರೂ ನೌಕರರು ಮಾತ್ರ ಅದೇ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಅವರಿಗೆ ಶಾಸನಾತ್ಮಕ ಸೌಲಭ್ಯಗಳನ್ನು ನೀಡಬೇಕು. ಎಲ್‌ಐಸಿ ಆಧಾರಿತ ಪಿಂಚಣಿ ನಿಗದಿಗೊಳಿಸಬೇಕು, 60 ವರ್ಷದ ನೆಪವೊಡ್ಡಿ ಯಾವುದೇ ಕಾರಣಕ್ಕೂ ನೌಕರರನ್ನು ಕೆಲಸದಿಂದ ತೆಗೆಯಬಾರದು. ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು ಎಂದು ಒತ್ತಾಯಿಸಿದರು.

’ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹದ ಕೈಪಿಡಿಯಲ್ಲಿ ಬದಲಾಯಿಸಬೇಕು. ಶಾಲೆಗಳಲ್ಲಿ ’ಡಿ‘ ಗ್ರೂಪ್ ನೌಕರರು ಇಲ್ಲ. ಆದ ಕಾರಣ ಈ ನೌಕರರನ್ನೇ ಸ್ವಚ್ಛತೆ, ಕೈ ತೋಟ ನಿರ್ವಹಣೆ ಇನ್ನಿತರ ಕೆಲಸಗಳಿಗೆ ನೀಡಿ ಶಾಲಾ ಸಿಬ್ಬಂದಿ ಎಂದು ನೇಮಕಾತಿ ಆದೇಶ ನೀಡಬೇಕು. ಕೊರೊನಾ ಸಂದರ್ಭದ 2020ರ ಏಪ್ರಿಲ್ ಮತ್ತು ಮೇ ತಿಂ‌ಗಳ ವೇತನ ನೀಡಬೇಕು ಎಂದರು.

ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ಮಾಡಬೇಕು. ಕ್ವಾರಂಟೈನ್‌ನಲ್ಲಿದ್ದವರಿಗೆ ಊಟ ಸಿದ್ದಗೊಳಿಸಿದವರಿಗೆ ವೇತನ ನೀಡಬೇಕು ಎಂದು ಹೇಳಿದರು.

ನರೇಗಾ ಯೋಜನೆಯ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಬೇಕು. ಹಣಕಾಸು ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೃಷಿ, ವಿದ್ಯುತ್ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಉಮಾ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಭಾಗ್ಯಮ್ಮ, ಶಾಂತಮ್ಮ, ನಾರಾಯಣಮ್ಮ, ಚನ್ನಮ್ಮ, ರೂಪಾ, ಬಸಮ್ಮ, ತಿಪ್ಪಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.