ಬುಧವಾರ, ಮೇ 19, 2021
26 °C
ಫಲಾನುಭವಿಗಳಿಗೆ ರಾಸು ವಿಮಾ ಚೆಕ್‌ ವಿತರಣೆ

ಖಾಸಗಿ ಡೇರಿ ತಾತ್ಕಾಲಿಕ, ಒಕ್ಕೂಟ ಶಾಶ್ವತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಖಾಸಗಿ ಡೇರಿಯವರು ಆರಂಭದಲ್ಲಿ ಹೆಚ್ಚಿನ ದರ ನೀಡುತ್ತಾರೆ. ಮುಂದೆ ದರ ಕಡಿಮೆ ಮಾಡುತ್ತಾರೆ. ಅದರ ಮಾಲೀಕರು ಮಾತ್ರ ಬಂಡವಾಳಶಾಹಿಗಳಾಗುತ್ತಾರೆ. ಉತ್ಪಾದಕರಿಗೆ ಅವರಿಂದ ಯಾವುದೇ ರೀತಿಯ ಸೌಲಭ್ಯ ದೊರೆಯುವುದಿಲ್ಲ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣಬಾಬು ನುಡಿದರು.

ನಗರದ ಶಿಬಿರದ ಕಚೇರಿಯಲ್ಲಿ ರಾಸು ವಿಮೆ ಫಲಾನುಭವಿಗಳಿಗೆ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.

ಹಾಲು ಒಕ್ಕೂಟ ಗುಣಮಟ್ಟದ ಹಾಲಿಗೆ ಸದ್ಯಕ್ಕೆ ಸ್ವಲ್ಪ ಕಡಿಮೆ ಬೆಲೆ ನೀಡುವುದನ್ನು ಹೊರತುಪಡಿಸಿದರೆ ಬೋನಸ್, ವಿಮೆ, ಉತ್ಪಾದಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ, ವಿದ್ಯಾರ್ಥಿವೇತನ, ಸಂಘಗಳ ಕಟ್ಟಡ ನಿರ್ಮಾಣಕ್ಕೆ ನೆರವು, ನೌಕರರಿಗೆ ಸೌಲಭ್ಯ ಸೇರಿದಂತೆ ಇತರೆ ಹಲವಾರು ಸೌಲಭ್ಯಗಳನ್ನು ಉತ್ಪಾದಕರಿಗೆ ಮತ್ತು ನೌಕರರಿಗೆ ನೀಡುತ್ತಿದೆ ಎಂದು ತಿಳಿಸಿದರು.

ಕೋವಿಡ್-19 ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳು ಬಂದ್ ಆದರೂ ಒಕ್ಕೂಟ ಉತ್ಪಾದಕರಿಂದ ಹಾಲು ಖರೀದಿ ನಿಲ್ಲಿಸಲಿಲ್ಲ. ಎಂತಹ ಸಂಕಷ್ಟ ಸಮಯದಲ್ಲೂ ರೈತರ ಸಹಾಯಕ್ಕೆ ಸಿದ್ಧವಾಗಿದೆ. ಒಕ್ಕೂಟದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ತಮಗೆ ಸಿಗಬೇಕಾದ ಸೌಲಭ್ಯ ಒದಗಿಸುತ್ತಿದ್ದಾರೆ ಎಂದರು.

ಪಶು ಆಹಾರ ಸೇರಿದಂತೆ ಇನ್ನೂ ಹಲವಾರು ಸೌಲಭ್ಯ ನೀಡುವ ಮೂಲಕ ಒಕ್ಕೂಟ ಶ್ರಮಿಸುತ್ತಿದೆ. ಖಾಸಗಿಯವರು ತಮ್ಮ ಉದ್ದಿಮೆ ಬೆಳೆಸಿಕೊಳ್ಳಲು ತಾತ್ಕಾಲಿಕವಾಗಿ ಬೆಲೆ ಹೆಚ್ಚಿಸಿ ಹಾಲಿನಿಂದ ಬರುವ ಬೋನಸ್ ನೀಡುವುದಿಲ್ಲ. ಜೊತೆಗೆ ಬೇರೆ ರೀತಿಯ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಉತ್ಪಾದಕರ ಮೂತಿಗೆ ಜೇನು ಸವರಿ, ಜೇನುತುಪ್ಪವನ್ನು ಖಾಸಗಿಯವರು ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

‘ತಾಲ್ಲೂಕಿನಲ್ಲಿರುವ ಎಲ್ಲಾ ಡೈರಿಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇನೆ. ಸ್ವಂತ ಕಟ್ಟಡಕ್ಕೆ ಅನುದಾನ, ಬಿಎಂಸಿ ಸೇರಿದಂತೆ ನಾನೇ ಖುದ್ದಾಗಿ ಒತ್ತಾಯಿಸಿ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡುತ್ತಿದ್ದೇನೆ. ಪಕ್ಷಾತೀತವಾಗಿ ಕೆಲಸ ನಿರ್ವಹಿಸುವ ಮೂಲಕ ಉತ್ಪಾದಕರು ಮತ್ತು ಸಂಘಗಳ ಅಭಿವೃದ್ಧಿ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.

ಕಟ್ಟಡಕ್ಕೆ ಸಹಾಯದನ ₹ 4.5 ಲಕ್ಷ, 4 ಫಲಾನುಭವಿಗೆ ರಾಸುಗಳ ವಿಮೆ ₹ 2.35 ಲಕ್ಷ, ಏನಿಗದಲೆ, ವಂಗಿಮಾಳ್, ನಡಂಪಲ್ಲಿಗೆ ರಾಸು ಮೇವು ಘಟಕಕ್ಕೆ ₹ 90 ಸಾವಿರ ಮತ್ತು ಸಾಮೂಹ ಹಾಲು ಕರೆಯುವ ಘಟಕಕ್ಕೆ ₹ 50 ಸಾವಿರ ಮೊತ್ತದ ಚೆರ್‌ಗಳನ್ನು ವಿತರಿಸಲಾಯಿತು. ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಎ.ವಿ. ಶಂಕರರೆಡ್ಡಿ, ವಿಸ್ತರಣಾಧಿಕಾರಿ ವೆಂಕಟೇಶ್‌ ಮೂರ್ತಿ, ವೆಂಕಟರವಣಪ್ಪ, ಎಂ.ಎಸ್. ನಾರಾಯಣಸ್ವಾಮಿ, ಪ್ರೇಮಕಿರಣ್, ಶಬ್ಬೀರ್, ಕೆ. ನಾರಾಯಣಸ್ವಾಮಿ ಹಾಜರಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು