ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನಗದು ಪಾವತಿಗೆ ವಿರೋಧ: ಸೆ.25ರಂದು ದೆಹಲಿಯಲ್ಲಿ ಜೈಲ್ ಭರೋ

ಸರ್ಕಾರಿ ಪಡಿತರ ವಿತರಕರು ಸಂಘಟನೆಗಳಿಂದ ಪ್ರತಿಭಟನೆ
Last Updated 4 ಸೆಪ್ಟೆಂಬರ್ 2018, 13:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪಡಿತರ ಚೀಟಿದಾರರಿಗೆ ಪಡಿತರದ ಬದಲು ನೇರ ನಗದು ಪಾವತಿ ಯೋಜನೆ ವಿರೋಧಿಸಿ ಸರ್ಕಾರಿ ಪಡಿತರ ವಿತರಕರು ಸಂಘಟನೆಗಳ ವತಿಯಿಂದ ಸೆಪ್ಟೆಂಬರ್ 25 ರಂದು ನವದೆಹಲಿಯಲ್ಲಿ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಮಚಂದ್ರಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಈಗಾಗಲೇ ಚಂಡಿಗಢ, ಪಾಂಡಿಚೇರಿಯಲ್ಲಿ ಒಂದು ವರ್ಷದ ಹಿಂದೆಯೇ ಈ ಯೋಜನೆ ಜಾರಿಗೆ ತಂದಿದೆ. ಇದೀಗ ಅದನ್ನು ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಲು ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

‘ಒಂದೊಮ್ಮೆ ಈ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತಂದರೆ ಸರ್ಕಾರಿ ಪಡಿತರ ವಿತರಕರು ಬೀದಿಪಾಲಾಗುತ್ತಾರೆ. ಕಾಳ ಸಂತೆ ದಂಧೆ ಹೆಚ್ಚುತ್ತದೆ. ಬಡವರು ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸಬೇಕಾಗುತ್ತದೆ. ಪಡಿತರದ ಬದಲು ನೀಡುವ ನಗದನ್ನು ಕುಡಿತ ಸೇರಿದಂತೆ ದುಶ್ಚಟಗಳಿಗೆ ಪೋಲು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ಯೋಜನೆ ಜಾರಿಗೆ ತರಬಾರದು’ ಎಂದು ಆಗ್ರಹಿಸಿದರು.

‘ಕೂಡಲೇ ಚಂಡಿಗಢ, ಪಾಂಡಿಚೇರಿಯಲ್ಲಿ ಕೂಡ ಈ ಯೋಜನೆ ನಿಲ್ಲಿಸಬೇಕು. ದೇಶದಾದ್ಯಂತ ಪಡಿತರ ಮತ್ತು ಸೀಮೆಎಣ್ಣೆ ವಿತರಣೆಯಲ್ಲಿ ಈ ಹಿಂದಿನ ಪದ್ಧತಿಯನ್ನು ಮುಂದುವರಿಸಬೇಕು. ಎಲ್ಲಾ ಜನರಿಗೆ ಪಡಿತರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ವಿತರಕರಿಗೆ ಪ್ರತಿ ಕ್ವಿಂಟಾಲ್‌ಗೆ ₨250 ಕಮಿಷನ್ ನೀಡಬೇಕು. ಇಡೀ ದೇಶದಾದ್ಯಂತ ವಿತರಣೆ ಮತ್ತು ಕಮಿಷನ್ ಮಾದರಿ ಏಕರೂಪದ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಣ್ಣ, ಪದಾಧಿಕಾರಿಗಳಾದ ರಾಮನಾಥ್, ನಾರಾಯಣಸ್ವಾಮಿ, ರಾಜಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT