ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಹಣ, ಆಮಿಷಕ್ಕೆ ಮರುಳಾಗದಿರಿ: ಎಚ್‌.ಡಿ.ಕುಮಾರಸ್ವಾಮಿ

ತಾಲ್ಲೂಕಿನ ನಂದಿ ಗ್ರಾಮದಲ್ಲಿ ನಡೆದ ಜೆಡಿಎಸ್‌ ಪ್ರಚಾರ ಸಭೆ
Last Updated 27 ನವೆಂಬರ್ 2019, 6:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಪಕ್ಷದವರಿಗೆ ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ನಂದಿ ಎಂ.ಅಂಜಿನಪ್ಪ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾಸ್ವಾಮಿ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ನಂದಿ ಗ್ರಾಮದ ಬೋಗನಂದೀಶ್ವರ ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಜೆಡಿಎಸ್ ಪಕ್ಷ ಸಮರ್ಥ ಅಭ್ಯರ್ಥಿಯನ್ನು ಆಯ್ಕೆಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದಲೇ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ’ ಎಂದರು.

ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಬಂದು ಕ್ಷೇತ್ರದ ಅಭಿವೃದ್ಧಿ ಕುರಿತು ಎಷ್ಟು ಬಾರಿ ಚರ್ಚಿಸಿದ್ದಾರೆ ಎಂಬುದನ್ನು ಜನರು ಪ್ರಶ್ನಿಸಬೇಕು ಎಂದರು.

ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲಿಡಿದು ಅವರು ಕೊಟ್ಟಿರುವ ಹಣಕ್ಕಾಗಿ ಬಿಜೆಪಿ ಸೇರಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಸುಧಾಕರ್ ಒಮ್ಮೆ ನಾನು ಅನಿತಾಕ್ಕನವರ ನೆಂಟ ಎಂದು ಹೇಳುತ್ತಾನೆ. ನೆಂಟರು ಎಂದು ಹೇಳಿಕೊಂಡು ಬೆನ್ನಿಗೆ ಚೂರಿ ಹಾಕುತ್ತಾನೆ. ಇನ್ನೂ ಈ ಕ್ಷೇತ್ರದ ಜನತೆಯನ್ನು ಬಿಡುತ್ತಾನಾ? ಈ ಬಗ್ಗೆ ಜನರು ಯೋಚಿಸಬೇಕಿದೆ ಎಂದರು.

ಬೋಗನಂದೀಶ್ವರ ದೇವಾಲಯಲ್ಲಿ ಜೆಡಿಎಸ್ ಅಭ್ಯರ್ಥಿ ಎನ್. ರಾಧಾಕೃಷ್ಣ ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ವೇಳೆ ದೇವರು ಕುಮಾರಸ್ವಾಮಿಗೆ ಬಲಭಾಗದಿಂದ ಹೂವು ನೀಡಿ ಆಶೀರ್ವದಿಸಿದ್ದಾರೆ. ಈ ಭಾರಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಕ್ರಮವಾಗಿ ಮಾಡಿರುವ ಹಣದಿಂದ ಈ ಉಪಚುನಾವಣೆ ನಡೆಸಲು ಬಂದಿದ್ದಾನೆ. ಕುಕ್ಕರ್, ಸೀರೆ, ಮಿಕ್ಸಿಗಾಗಿ ಮತದಾರರು ಮರಳಾಗಬೇಡಿ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಬಿಜೆಪಿಯನ್ನು ದೂರ ಇಟ್ಟು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಳಗಾವಿಯಲ್ಲಿ ಯಡಿಯೂರಪ್ಪನವರು ಈ ಕ್ಷೇತ್ರಕ್ಕೆ ₹ 700 ಕೋಟಿ ಅನುದಾನ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿ ನಾನು ಕೊಟ್ಟಿರುವ ಅನುದಾನ ಬಿಟ್ಟರೆ ಈ ಕ್ಷಣದವರೆಗೂ ನಯಾ ಪೈಸೆ ಕೊಟ್ಟಿಲ್ಲ. ಇನ್ನೂ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಅವರು ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಲ್ಲಾ ಸಮಯದಲ್ಲೂ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ಹಣದ ಹೊಳೆ ಹರಿಸಿ ಅದರಿಂದ ಗೆಲ್ಲಲು ಹೊರಟಿದ್ದಾರೆ. ಕಳೆದ ವಿಧಾನ ಸಭೆ ಚುಣಾವಣೆಯಲ್ಲಿ ಕುಕ್ಕರ್. ಮಿಕ್ಸಿ ಕೊಟ್ಟಿದ್ದರು. ಈ ವರ್ಷ ಏನನ್ನು ಕೊಡೋದಕ್ಕೆ ತಯಾರು ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮೆಡಿಕಲ್‌ ಕಾಲೇಜು: ಚರ್ಚೆಗೆ ಸಿದ್ಧ
2014ನೇ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ 30 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಘೋಷಿಸಿದರು. ಆಗ ಸುಧಾಕರ್ ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲಿಲ್ಲ. ಈಗ ಉಪಚುನಾವಣೆ ಗೆಲ್ಲಲು ಮೆಡಿಕಲ್ ಕಾಲೇಜಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕನಕಪುರಕ್ಕೆ ಕೊಟ್ಟಿರುವ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರದಿಂದ ತಪ್ಪಿಸಿದಲ್ಲ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ದವಿದ್ದೇನೆ ಎಂದು ಸುಧಾಕರ್‌ಗೆ ಸವಾಲು ಹಾಕಿದರು. ಕ್ಷೇತ್ರಕ್ಕೆ ಮಂಜೂರಾಗಿರುವ ಮೆಡಿಕಲ್‌ ಕಾಲೇಜಿನಲ್ಲಿ ಸ್ಥಳೀಯ ಯುವಕರಿಗೆ ಸೀಟು ಸಿಗುವುದಿಲ್ಲ. ದುಡ್ಡು ನಿಮ್ಮದ್ದು ಕಾಲೇಜಿಗೆ ಬರುವವರು ಹೊರಗಿನವರು ಎಂದರು.

ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಎನ್. ರಾಧಾಕೃಷ್ಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಜೆ.ಕೆ. ಕೃಷ್ಣಾರೆಡ್ಡಿ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT