ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜೆಡಿಎಸ್ ಟಿಕೆಟ್, ಸ್ಥಳೀಯರಿಗೆ ನೀಡಿ

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜೆಡಿಎಸ್ ನಾಯಕರಿಂದ ವರಿಷ್ಠರಿಗೆ ಮನವರಿಕೆ
Last Updated 17 ನವೆಂಬರ್ 2021, 3:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸ್ಥಳೀಯರಿಗೆ ಟಿಕೆಟ್ ನೀಡಿ’–ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜೆಡಿಎಸ್ ನಾಯಕರು ಪಕ್ಷದ ವರಿಷ್ಠರನ್ನು ಆಗ್ರಹಿಸುತ್ತಿರುವ ಪರಿ.

ವಿಧಾನ ಪರಿಷತ್‌ನ ಕೋಲಾರ ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್ ಗೆಲುವು ಸಾಧಿಸಿತ್ತು. ಬೆಂಗಳೂರಿನ ಸರ್ಜಾಪುರದ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಈಗ ಜೆಡಿಎಸ್‌ನಿಂದ ದೂರ ಸರಿದಿದ್ದಾರೆ. ಈ ಕಾರಣದಿಂದ ಜೆಡಿಎಸ್ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಚಿಂತಾಮಣಿ, ಶಿಡ್ಲಘಟ್ಟ, ಮುಳಬಾಗಿಲು, ಕೋಲಾರ ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಅವಳಿ ಜಿಲ್ಲೆಗಳು ಉಳಿದ ತಾಲ್ಲೂಕುಗಳಲ್ಲಿಯೂ ತನ್ನದೇ ನೆಲೆಯನ್ನು ಹೊಂದಿದೆ. ಜೆಡಿಎಸ್‌ ಪ್ರಬಲವಾಗಿರುವ ಜಿಲ್ಲೆಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸಹ ಪ್ರಮುಖವಾದವು. ಈ ಹಿಂದಿನ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಈ ಕ್ಷೇತ್ರದಲ್ಲಿ ಹಣಾಹಣಿ ನಡೆದಿತ್ತು. ಈ ಎಲ್ಲ ದೃಷ್ಟಿಯಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವುದು ಅವಳಿ ಜಿಲ್ಲೆಗಳ ಪಕ್ಷಗಳ ಮುಖಂಡರ ಒಕ್ಕೊರಲ ಆಗ್ರಹ.

ಎರಡೂ ಜಿಲ್ಲೆಯಲ್ಲಿ ಪಕ್ಷಕ್ಕೆ ದುಡಿದ ಯಾರಿಗಾದರೂ ಟಿಕೆಟ್ ಕೊಡಲಿ. ಸ್ಥಳೀಯರಿಗೆ ಟಿಕೆಟ್ ನೀಡುವುದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದೇವೆ ಎಂದು ಜೆಡಿಎಸ್ ನಾಯಕರು ನುಡಿಯುವರು.

ಸಿ.ಆರ್.ಮನೋಹರ್ ಗೆಲುವು ಸಾಧಿಸಿದ್ದರೂ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಮುಖಂಡರು, ಕಾರ್ಯಕರ್ತರ ಸಂಪರ್ಕಕ್ಕೂ ದೊರೆಯುತ್ತಿರಲ್ಲ. ಇದು ಪಕ್ಷ ಸಂಘಟನೆಯ ಮೇಲೆ ಪರಿಣಾಮ ಸಹ ಬೀರಿತ್ತು. ಈ ಎಲ್ಲವನ್ನೂ ಆಲೋಚಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಪಕ್ಷದ ಆಂತರಿಕ ವಲಯದಿಂದ ಕೇಳಿ ಬರುತ್ತಿದೆ.

ಬಿಡದಿಯ ಫಾರಂ ಹೌಸ್‌ನಲ್ಲಿ ಬುಧವಾರ (ನ.17) ಎರಡೂ ಜಿಲ್ಲೆಗಳ ಜೆಡಿಎಸ್ ನಾಯಕರ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಇಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಮೂಲಗಳು ತಿಳಿಸುತ್ತವೆ.

ವಿಧಾನ ಪರಿಷತ್‌ ಮಾಜಿ ಸದಸ್ಯರಾದ ತೂಪಲ್ಲಿ ಆರ್‌.ಚೌಡರೆಡ್ಡಿ, ಟಿ.ಎ.ಶರವಣ, ಜಿ.ಪಂ ಮಾಜಿ ಸದಸ್ಯ ಕೆ.ಎಸ್‌.ನಂಜುಂಡಪ್ಪ, ಕೋಲಾರ ಜೆಡಿಎಸ್‌ ಮುಖಂಡರಾದ ಶ್ರೀನಾಥ್, ವಕ್ಕಲೇರಿ ರಾಮು, ಬೆಂಗಳೂರಿನ ರಮೇಶ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ರಾಜ್ಯಸಭಾ ಮಾಜಿ ಸದಸ್ಯಕುಪೇಂದ್ರ ರೆಡ್ಡಿ ಅವರ ಹೆಸರೂ ಸಹ ಕೇಳಿ ಬಂದಿದೆ.

ಪ್ರಬಲ ನೆಲೆಯನ್ನು ಹೊಂದಿರುವ ಅವಳಿ ಜಿಲ್ಲೆಗಳ ಈ ಕ್ಷೇತ್ರದಿಂದ ಪಕ್ಷವು ಯಾರನ್ನು ಕಳಕ್ಕಿಳಿಸಲಿದೆ ಎನ್ನುವ ಕುತೂಹಲ ಸಹ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT