ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಕ್ಕೆ ಬೆಂಕಿ- ನಗರಸಭೆಯವರು ಕ್ರಮವಹಿಸಿ: ನ್ಯಾಯಾಧೀಶರ ಸೂಚನೆ

ಚನ್ನಯ್ಯ ಉದ್ಯಾನದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ; ನ್ಯಾಯಾಧೀಶರ ಸೂಚನೆ
Last Updated 31 ಜನವರಿ 2023, 6:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಯಾರೂ ಸಹ ಕಸಕ್ಕೆ ಬೆಂಕಿ ಹಚ್ಚಬಾರದು. ನಗರ ವ್ಯಾಪ್ತಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದು ಕಂಡು ಬಂದರೆ ನಗರಸಭೆಯುವರು ತಕ್ಷಣವೇ ಕ್ರಮವಹಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜಶೇಖರ್ ಅವರು ಸೂಚಿಸಿದರು.

ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ನಗರದ ಚನ್ನಯ್ಯ ಉದ್ಯಾನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಗರಸಭೆಯು ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಅವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು ಎನ್ನುವ ಆಶಯ ಅವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ನಗರ, ಪಟ್ಟಣ, ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾರೂ ಸಹ ರಸ್ತೆ ಬದಿ ಕಸ, ಬಾಟಲಿಗಳು, ಬಳಸಿದ ಆಹಾರದ ಪೊಟ್ಟಣಗಳನ್ನು ಎಸೆಯಬಾರದು. ನಾವು ಸ್ವಚ್ಛವಾಗಿರಬೇಕು ಎಂದರೆ ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಜನರು ಸಹ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಬೀದಿ ಬದಿ ಕಸಕ್ಕೆ ಬೆಂಕಿ ಹಚ್ಚಬಾರದು. ಉದ್ಯಾನಗಳನ್ನು ಸ್ವಚ್ಛಗಾಗಿ ಇಟ್ಟುಕೊಳ್ಳಬೇಕು. ಉಳಿದ ಉದ್ಯಾನಗಳನ್ನೂ ನಗರಸಭೆಯುವರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡಿ, ಚನ್ನಯ್ಯ ಉದ್ಯಾನ ಬಸ್ ನಿಲ್ದಾಣಕ್ಕೆ ಸಮೀಪವಿದೆ. ಇಲ್ಲಿ ಕಸ ಹೆಚ್ಚಿರುತ್ತದೆ ಎಂದು ಸ್ವಚ್ಛತೆ ಕೈಗೊಂಡಿದ್ದೇವೆ ಎಂದರು.

ಹಳ್ಳಿ, ನಗರ, ಪಟ್ಟಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಮ್ಮ ಮನೆ, ಪರಿಸರ, ಅಂಗಳವನ್ನು ಸ್ವಚ್ಛವಾಗಿ ಇರಿಸಬೇಕು. ಎಲ್ಲವನ್ನೂ ನಗರಸಭೆ, ಪುರಸಭೆಯವರು ಬಂದು ಮಾಡಬೇಕು ಎನ್ನುವ ಧೋರಣೆಯನ್ನು ಬಿಡಬೇಕು. ತಮ್ಮ ಮನೆಯ ಪಕ್ಕದ ಖಾಲಿ ನಿವೇಶಗಳಲ್ಲಿ ಜನರು ಕಸವನ್ನು ಎಸೆಯುತ್ತಾರೆ. ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನ ಬಂದರೂ ಕಸವನ್ನು ಕೊಡಬೇಕು ಎನ್ನುವ ಪರಿಜ್ಞಾನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಸ್ವಚ್ಛ ನಗರವಾಗಬೇಕು ಎನ್ನುವ ಉದ್ದೇಶ ನಮ್ಮದು. ನಾಗರಿಕರು ಸಹ ಈ ದಿಕ್ಕಿನಲ್ಲಿ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ನಗರಸಭೆ ಪೌರಾಯುಕ್ತ ಉಮಾಶಂಕರ್, ನಗರಸಭೆ ಅಧಿಕಾರಿಗಳು, ವಕೀಲರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT