ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಕ್ಷೇತ್ರ ಸ್ಥಿತಿಗತಿ: ಸೈದ್ಧಾಂತಿಕ ಅಖಾಡದಲ್ಲಿ ‘ಬಂಡವಾಳ’ ಪ್ರಭಾವ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಸುಬ್ಬಾರೆಡ್ಡಿ
Last Updated 28 ಜನವರಿ 2023, 6:26 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತೆಲುಗಿನ ದಟ್ಟ ಪ್ರಭಾವದ ತೀರಾ ಹಿಂದುಳಿದ ನೆಲ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ. ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕುಗಳನ್ನು ಒಳಗೊಂಡ ವಿಶಾಲ ವ್ಯಾಪ್ತಿ ಇದೆ. ಕಾಂಗ್ರೆಸ್‌ ಮತ್ತು ಸಿಪಿಎಂ ನಡುವಿನ ಸೈದ್ಧಾಂತಿಕ ಸಂಘರ್ಷಕ್ಕೆ ಈ ಕ್ಷೇತ್ರ ‘ಅಖಾಡ’ವಾಗುತ್ತಲೇ ಬಂದಿದೆ.

ಕಮ್ಯುನಿಸ್ಟರ ರಾಜ್ಯ ನಾಯಕರಾಗಿದ್ದ ಜಿ.ವಿ. ಶ್ರೀರಾಮರೆಡ್ಡಿ ಅವರು ಹೋರಾಟಗಳನ್ನು ಕಟ್ಟಿದ ಮತ್ತು ವಿಧಾನಸಭೆ ಪ್ರವೇಶಿಸಿದ ನೆಲ. ಇಂತಿಪ್ಪ ನೆಲ ಈಗ ಸಂಪೂರ್ಣವಾಗಿ ಬಂಡವಾಳ ಹೂಡಿಕೆಯ ಕ್ಷೇತ್ರವಾಗಿ ಬದಲಾಗಿದೆ.

ಎರಡು ಬಾರಿ ಗೆಲುವು ಸಾಧಿಸಿರುವ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ಮೂರನೇ ಬಾರಿ ಗೆಲ್ಲಲು ತಯಾರಿ ನಡೆಸಿದ್ದಾರೆ. 2013ರಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ ಸುಬ್ಬಾರೆಡ್ಡಿ ನಂತರ ಕಾಂಗ್ರೆಸ್ ಸೇರಿ ಗೆಲುವು ಕಂಡರು. ಪಕ್ಷೇತರ ಅಭ್ಯರ್ಥಿಯಾದ ಸಂದರ್ಭದಲ್ಲಿ ಅವರೂ ಇಲ್ಲಿ ಬಂಡವಾಳ ಹೂಡಿಕೆ ಮಾಡಿ ಗೆಲುವಿನ ಫಸಲು ತೆಗೆದರು.

ಸುಬ್ಬಾರೆಡ್ಡಿ ಅವರ ಹ್ಯಾಟ್ರಿಕ್ ಗೆಲುವಿಗೆ ತಡೆ ನೀಡಲು ಸಿಪಿಎಂ, ಬಿಜೆಪಿ, ಜೆಡಿಎಸ್ ತಯಾರಿ ನಡೆಸಿವೆ. ಶಾಸಕರಾದ ಕಾರಣ ಸುಬ್ಬಾರೆಡ್ಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿದೆ. ಮತ್ತೊಂದು ಕಡೆ ಮಾಜಿ ಶಾಸಕ ಎನ್. ಸಂಪಂಗಿ ಅವರು ಸಹ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದು, ಟಿಕೆಟ್ ಕೋರಿ ಪಕ್ಷಕ್ಕೆ ಅರ್ಜಿ ಸಹ ಸಲ್ಲಿಸಿದ್ದಾರೆ.

1983ರಿಂದ 2018ರವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸಿಪಿಎಂ ಮೂರು ಬಾರಿ ಗೆಲುವು ಸಾಧಿಸಿದೆ. ಸೋಲು ಕಂಡ ಸಮಯದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸಿಪಿಎಂಗೆ ತಳಮಟ್ಟದಿಂದಲೇ ಕಾರ್ಯಕರ್ತರ ಪಡೆ ಇದೆ. ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ ಸಿಪಿಎಂ ಅಭ್ಯರ್ಥಿಯಾಗಿದ್ದಾರೆ.

2008ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಜೆ. ನಾಗರಾಜ ರೆಡ್ಡಿ ಈಗ ಮತ್ತೊಮ್ಮೆ ಅದೇ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ. ಜೆಡಿಎಸ್ ಪಕ್ಷವು ಅವರೇ ಅಭ್ಯರ್ಥಿ ಎಂದು ಘೋಷಿಸಿದೆ.

ಬಿಜೆಪಿಯಿಂದ ಪಕ್ಷದ ಜಿಲ್ಲಾ ಅಧ್ಯಕ್ಷ ಟಿ. ರಾಮಲಿಂಗಪ್ಪ, ನಗರ ಹೊರವರ್ತುಲ ಪ್ರಾಧಿಕಾರದ ಅಧ್ಯಕ್ಷ ಸಿ. ಮುನಿರಾಜು, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಟಿಕೆಟ್ ಆಕಾಂಕ್ಷಿಗಳು. ಈ ಮೂವರು ಸಹ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುತ್ತಿದ್ದಾರೆ. ಜನರ ಬಳಿ ಹೋಗುತ್ತಿದ್ದಾರೆ.

ಪ್ರಜಾ ಸಂಘರ್ಷ ಸಮಿತಿ ಬೆಂಬಲದಿಂದ ಮಿಥುನ್ ರೆಡ್ಡಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಎಎಪಿಯಿಂದ ಮಧು ಸೀತಪ್ಪ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಸಿಪಿಎಂ, ಜೆಡಿಎಸ್ ಹೊರತುಪಡಿಸಿ ಉಳಿದ ಯಾವ ಪಕ್ಷವೂ ಇವರೇ ಅಭ್ಯರ್ಥಿ ಎಂದು ಇಲ್ಲಿಯವರೆಗೆ ಅಧಿಕೃತವಾಗಿ ಘೋಷಿಸಿಲ್ಲ.

ಒಕ್ಕಲಿಗ ರೆಡ್ಡಿ ಮತದಾರರು ಗಣನೀಯವಾಗಿ ಇರುವ ಕ್ಷೇತ್ರದಲ್ಲಿ‌ ಬಲಿಜಿಗರು, ಪರಿಶಿಷ್ಟ ಜಾತಿ, ಮುಸ್ಲಿಮರು ಸೋಲು ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ಸೈದ್ಧಾಂತಿಕ ಸಂಘರ್ಷಕ್ಕೆ ಹೆಸರಾದ ಬಾಗೇಪಲ್ಲಿಯಲ್ಲಿ ಈಗ ಅಭ್ಯರ್ಥಿಯಾಗುವವರು ಕೈ ಬಿಚ್ಚಿ ಹಣ ಚೆಲ್ಲಲೇ ಬೇಕು ಎನ್ನುವ ಸ್ಥಿತಿ ಇದೆ.

ಶ್ರೀರಾಮರೆಡ್ಡಿ ಇಲ್ಲದ ನಿರ್ವಾತ

ಸೋಲಲಿ ಗೆಲ್ಲಲಿ 1985ರಿಂದ 2018ರ ಚುನಾವಣೆಯವರೆಗೂ ಈ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದ ಜಿ.ವಿ.ಶ್ರೀರಾಮರೆಡ್ಡಿ ಅವರ ಸಾವು ಬಾಗೇಪಲ್ಲಿ ರಾಜಕಾರಣದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿದೆ. ಕಣಕ್ಕೆ ಇಳಿದವರೆಲ್ಲರೂ ಒಂದಲ್ಲಾ ಒಂದು ಕಾರಣಕ್ಕೆ ಶ್ರೀರಾಮರೆಡ್ಡಿ ಅವರ ಹೆಸರು ಹೇಳುತ್ತಲೇ ಇದ್ದಾರೆ. ಶ್ರೀರಾಮರೆಡ್ಡಿ ಸಿಪಿಎಂನಿಂದ ಉಚ್ಛಾಟಿತರಾದ ನಂತರ ಪ್ರಜಾಸಂಘರ್ಷ ಸಮಿತಿ (ಪಿಎಸ್‌ಎಸ್‌) ಸ್ಥಾಪಿಸಿದರು. ಜಿವಿಎಸ್ ನಿಧನದ ತರುವಾಯ ಅವರ ಅನುಯಾಯಿಗಳು ಚದುರಿದ್ದಾರೆ. ಅವರ ನಿಧನ ಹೂಡಿಕೆದಾರರು ಬಾಗೇಪಲ್ಲಿ ಕ್ಷೇತ್ರದತ್ತ ದೃಷ್ಟಿ ಹರಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT