ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ ಕ್ಷೇತ್ರ ಸ್ಥಿತಿ–ಗತಿ| ಬಿಜೆಪಿಯಲ್ಲಿ ಮುಂದುವರಿದ ಗೊಂದಲ

ಕರ್ನಾಟಕ ವಿಧಾನಸಭಾ ಚುನಾವಣೆ – 2023
Last Updated 14 ಜನವರಿ 2023, 6:07 IST
ಅಕ್ಷರ ಗಾತ್ರ

ಚಿಂತಾಮಣಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಆದರೆ ಬಿಜೆಪಿಯಲ್ಲಿ ಮಾತ್ರ ಗೊಂದಲ ಮುಂದುವರಿದಿದೆ. ಚಿಂತಾಮಣಿ ಕ್ಷೇತ್ರದಲ್ಲಿ ಈ ಹಿಂದಿನಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದಾರೆ.

ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗುತ್ತಿವೆ. ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಎಂ.ಸಿ.ಸುಧಾಕರ್ ಅಭ್ಯರ್ಥಿಗಳಾಗುವುದು ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಸ್ಥಳೀಯ ಬಿಜೆಪಿ ಮುಖಂಡರು ಹೈಕಮಾಂಡ್ ಹೇಳಿದವರು ಅಭ್ಯರ್ಥಿ ಎನ್ನುತ್ತಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಭಾಮೈದ ಕೆ.ವಿ.ಸತ್ಯನಾರಾಯಣರೆಡ್ಡಿ, ಚಿಂತಾಮಣಿ ಮೂಲದ ಬೆಂಗಳೂರು ನಿವಾಸಿ ಎಂ.ಆರ್.ಬಾಬು, ಸ್ಥಳೀಯರಾದ ಅರುಣಬಾಬು ಟಿಕೆಟ್ ಆಕಾಂಕ್ಷಿಗಳು. ಈ ನಡುವೆ ಸಮಾಜಸೇವಕ ವೇಣುಗೋಪಾಲ್ ಬಿಜೆಪಿಗೆ ಬರಲಿದ್ದಾರೆ. ಅವರು ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಯೂ ಇದೆ.

ಸಚಿವರು ತಮ್ಮ ಭಾಮೈದುನ ಕೆ.ವಿ.ಸತ್ಯನಾರಾಯಣರೆಡ್ಡಿಯನ್ನು ಬೆಂಬಲಿಸಿದರೆ, ಸಂಸದ ಎಸ್.ಮುನಿಸ್ವಾಮಿ ಎಂ.ಆರ್.ಬಾಬು ಪರ ವಕಾಲತ್ತು ವಹಿಸಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ಕಾರ್ಯಕರ್ತರು ಹೈರಾಣಾಗಿದ್ದಾರೆ. ಇಬ್ಬರು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಕಾರ್ಯಕರ್ತರು ಯಾರ ಜತೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ಮೂರನೆಯ ಗುಂಪು ಸಮಾಜ ಸೇವಕ ಜಿ.ಎನ್.ವೇಣುಗೋಪಾಲ್ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು. ಇಬ್ಬರೂ ಪ್ರಬಲ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಬಿಜೆಪಿಗೆ ಅಷ್ಟೊಂದು ಶಕ್ತಿ ಇಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮೇಲೆ ಮುನಿಸಿಕೊಂಡು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಪಕ್ಷದಿಂದ ದೂರವಾಗಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

ಕೆಪಿಸಿಸಿ ಎಚ್ಚೆತ್ತು ಡಾ.ಎಂ.ಸಿ.ಸುಧಾಕರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡಿದೆ. ಅವರ ಬೆಂಬಲಿಗರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಹೊಸ ಉರುಪಿನಿಂದ ಮುನ್ನುಗ್ಗುತ್ತಿದೆ. ಕಾಂಗ್ರೆಸ್, ಜೆಡಿಎಸ್, ಸಮಾಜಸೇವಕ ವೇಣುಗೋಪಾಲ್, ಬಿಜೆಪಿ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.

ಶಾಸಕ ಎಂ.ಕೃಷ್ಣಾರೆಡ್ಡಿ ಜನತಾಜಲಧಾರೆ, ಪಂಚತಂತ್ರ ಯಾತ್ರೆಗಳ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆಪದಲ್ಲಿ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಹ ಹೋಬಳಿವಾರು ಕಾರ್ಯಕರ್ತರ ಸಭೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದ್ದ ಅಮೃತಮಹೋತ್ಸವ ಕಾರ್ಯಕ್ರಮ, ಮೇಕೆದಾಟು ಪಾದಯಾತ್ರೆ, ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮ, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯಲ್ಲಿ ಕಾರ್ಯಕರ್ತರನ್ನು ತೊಡಗಿಸುವ ಮೂಲಕ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ.

ಬಿಜೆಪಿ ಮುಖಂಡರು ಸಹ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿಕಾರ್ಯಕರ್ತರ ಸಭೆಗಳನ್ನು ನಡೆಸಿದ್ದಾರೆ. ಪ್ರಸ್ತುತ ಬೂತ್ ವಿಜಯ್ ಅಭಿಯಾನವನ್ನು ಎಲ್ಲೆಡೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಹಿಂದಿನಿಂದಲೂ ಬಿಜೆಪಿ ಬೇರುಗಳು ಗಟ್ಟಿಯಾಗಿಲ್ಲ. ಅಭ್ಯರ್ಥಿ ನಿಲ್ಲಿಸುವುದು, ಪ್ರಚಾರ ಮಾಡುವುದು, ಚುನಾವಣಾ ಸಮಯದಲ್ಲಿ ಮತ್ಯಾರಿಗೋ ರಹಸ್ಯವಾಗಿ ಬೆಂಬಲ ನೀಡುವುದು ಮಾಮೂಲಿಯಾಗಿದೆ ಎಂದು ನಿಷ್ಠಾವಂತ ಕಾರ್ಯಕರ್ತರೇ ಅವಲತ್ತುಕೊಳ್ಳುತ್ತಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆ ಆಗಲಿಲ್ಲ ಎಂದು ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವನಹಳ್ಳಿಯ ಜಿ.ಎನ್.ವೇಣುಗೋಪಾಲ್ ಕೆ.ಎಂ.ಕೆ ಟ್ರಸ್ಟ್ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ದೇವಾಲಯ, ಮಸೀದಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಜನಸೇವಾ ಕೇಂದ್ರಕ್ಕೆ ಚಾಲನೆ ನೀಡುವ ನೆಪದಲ್ಲಿ ಬೆಂಬಲಿಗರ ಸಭೆಯನ್ನು ನಡೆಸಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವುದು, ಮಹಿಳೆಯರನ್ನು ಯಾತ್ರೆ, ಪ್ರವಾಸಗಳಿಗೆ ಕಳುಹಿಸುತ್ತಿದ್ದಾರೆ.

ಕ್ಷೇತ್ರದಲ್ಲಿ 60 ವರ್ಷಗಳ ಕಾಲ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಮಾಜಿ ಸಚಿವರಾದ ಎ.ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ಕುಟುಂಬದ ರಾಜಕೀಯ ಯುಗವನ್ನು ಶಾಸಕ ಎಂ.ಕೃಷ್ಣಾರೆಡ್ಡಿ ಅಂತ್ಯಗೊಳಿಸಿದರು. ನಾನೊಮ್ಮೆ ನೀನೊಮ್ಮೆ ಎಂಬಂತೆ ಚಿಂತಾಮಣಿ ಶಾಸಕರಾಗಿ ಈ ಇಬ್ಬರು ಸಚಿವರೂ ಆದರು. ಸಮಾಜಸೇವೆಯಿಂದ ಕ್ಷೇತ್ರಕ್ಕೆ ಕಾಲಿಟ್ಟ ಬೆಂಗಳೂರಿನ ಎಂ.ಕೃಷ್ಣಾರೆಡ್ಡಿ 2013 ರಲ್ಲಿ ಜಯಗಳಿಸಿ ಕ್ಷೇತ್ರದ ರಾಜಕೀಯದಲ್ಲಿ ಹೊಸ ಮನ್ವಂತರ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT