ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರ ಸ್ಥಿತಿ–ಗತಿ| ಕಾಂಗ್ರೆಸ್‌ನಲ್ಲಿ ಟಿಕೆಟ್ ಯಾರಿಗೆ?

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ ಪಾಳಯದಲ್ಲಿ ಅಭ್ಯರ್ಥಿಯ ಗೊಂದಲ
Last Updated 19 ಜನವರಿ 2023, 11:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ?–ಇದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ತೀವ್ರ ಚರ್ಚೆಯಾಗುತ್ತಿರುವ ವಿಷಯ. ಕಾಂಗ್ರೆಸ್ ಟಿಕೆಟ್ ವಿಚಾರ ಪಕ್ಷವನ್ನು ಮನೆಯೊಂದು ಮೂರು ಬಾಗಿಲು ಎನ್ನುವಂತೆ ಮಾಡಿದೆ.

ಶೇ 90ರಷ್ಟು ಇವರಿಗೆ ಟಿಕೆಟ್ ದೊರೆಯುತ್ತದೆ, ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಿಲ್ಲ, ಸ್ಥಳೀಯರಿಗೆ ಟಿಕೆಟ್ ನೀಡುವರು, ಆ ಅಭ್ಯರ್ಥಿಗೆ ಜಾತಿಯ ಬಲವಿಲ್ಲ, ಅವರು ಪಕ್ಷ ಸಂಘಟಿಸಲು ಈಗಾಗಲೇ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ, ಟಿಕೆಟ್ ನೀಡಿದರೆ ದೊಡ್ಡ ಮಟ್ಟದಲ್ಲಿಯೇ ಹಣ ಖರ್ಚು ಮಾಡಿ ಚುನಾವಣೆ ಎದುರಿಸುವರು, ಅವರಿಗೆ ಟಿಕೆಟ್ ನೀಡಿದರೆ ಕಷ್ಟವಾಗುತ್ತದೆ–ಹೀಗೆ ನಾನಾ ರೀತಿಯ ಚರ್ಚೆಗಳು ಬಹಿರಂಗವಾಗಿ ಮತ್ತು ಆಂತರಿಕವಾಗಿ ಪಕ್ಷದಲ್ಲಿ ಆಗುತ್ತಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಕೆಪಿಸಿಸಿ ಸದಸ್ಯ ವಿನಯ್ ಎನ್.ಶ್ಯಾಮ್, ಕೆಪಿಸಿಸಿ ಕಾರ್ಯದರ್ಶಿ ಕೆ.ಎನ್.ರಘು, ಮುಖಂಡ ಯಲುವಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ, ಲಾಯರ್ ನಾರಾಯಣಸ್ವಾಮಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಅಭ್ಯರ್ಥಿಯಾಗಲಿ ಎಂದು ಕಾಂಗ್ರೆಸ್‌ನ ಮತ್ತೊಂದಿಷ್ಟು ಮಂದಿ ಸಹಿ ಮಾಡಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆ ಯುವಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರನ್ನು ಕರೆತರಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಯತ್ನಿಸಿದ್ದರು. ಆದರೆ ರಕ್ಷಾ ಅವರೇ ಇಲ್ಲಿಗೆ ಬರುವ ಮನಸ್ಸು ಮಾಡಲಿಲ್ಲ. ಜಾತಿ, ಹಣ, ಪ್ರಭಾವ, ಜನರ ವಿಶ್ವಾಸ, ಪಕ್ಷದ ಪರವಾಗಿ ಮಾಡಿರುವ ಕೆಲಸ, ಸಾಮಾಜಿಕ ನ್ಯಾಯ, ಅವರ ಹಿನ್ನೆಲೆ ಹೀಗೆ ನಾನಾ ಆಯಾಮದಲ್ಲಿ ಅಭ್ಯರ್ಥಿಯ ಆಯ್ಕೆಗೆ ಕೈಪಾಳಯದಲ್ಲಿ ಚರ್ಚೆಗಳು ನಡೆದಿವೆ.

ಟಿಕೆಟ್ ವಿಚಾರ ಸದ್ಯ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಗುಂಪುಗಳನ್ನಾಗಿ ವಿಭಾಗಿಸಿದೆ. ಮತ್ತೊಂದೆಡೆ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುವುದಾಗಿ ನಾಯಕರು ಬಹಿರಂಗವಾಗಿ ನುಡಿಯುತ್ತಿದ್ದಾರೆ. ಒಂದು ವೇಳೆ ಇವರಿಗೆ ಟಿಕೆಟ್ ನೀಡಿದರೆ ಮತ್ತೊಂದು ಗುಂಪಿನ ನಿಲುವೇನು? ಒಗ್ಗೂಡಿ ಪಕ್ಷಕ್ಕೆ ಕೆಲಸ ಮಾಡುತ್ತಾರೆಯೇ? ತಟಸ್ಥರಾಗುತ್ತಾರೆಯೇ? ಒಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಾರೆಯೇ? ಎನ್ನುವ ಚರ್ಚೆಗಳು ಬಿಡುಬೀಸಾಗಿವೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿಯೂ ಬೆಂಬಲಿಗರು ಇವರಿಗೆ ಟಿಕೆಟ್ ಎಂದು ಪೋಸ್ಟರ್‌ಗಳನ್ನು ಹರಿಬಿಡುತ್ತಿದ್ದಾರೆ. ವರಿಷ್ಠರು ಮಾತ್ರ ಎಲ್ಲರಿಂದಲೂ ಅರ್ಜಿಯನ್ನು ಸ್ವೀಕರಿಸಿ ಅಳೆದುತೂಗಿ ಅಭ್ಯರ್ಥಿ ಆಯ್ಕೆಗೆ ನಿರ್ಧರಿಸಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಕಸಬಾ, ಮಂಚೇನಹಳ್ಳಿ, ನಂದಿ ಮತ್ತು ಮಂಡಿಕಲ್ಲು ಹೋಬಳಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಒಕ್ಕಲಿಗರು, ಬಲಿಜಿಗರ ಮತಗಳೇ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುತ್ತವೆ. ಕ್ಷೇತ್ರದ ಇತಿಹಾಸವನ್ನು ನೋಡಿದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆಲುವು ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ನೆಲೆಗಟ್ಟಿದೆ. ಮತಗಳ ಇಡುಗಂಟಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್‌ ಪರವಾಗಿ ಈ ಹಿಂದಿನಿಂದಲೂ ದೊಡ್ಡ ಮಟ್ಟದಲ್ಲಿ ನಿಂತಿದ್ದಾರೆ.

‘ಹಿಂದ’ ವರ್ಗಕ್ಕೆ ಅವಕಾಶವೇ?

ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷ. ಟಿಕೆಟ್ ಆಯ್ಕೆಯ ವಿಚಾರದಲ್ಲಿ ಇದು ಸಹ ಗಣನೆಗೆ ಬರುತ್ತದೆ ಎಂದು ವೀಕ್ಷಕರು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ದಲಿತ, ಹಿಂದುಳಿದ (ಹಿಂದ) ವರ್ಗಗಳಿಗೆ ಮನ್ನಣೆ ಕೊಡುತ್ತದೆಯೇ ಎನ್ನುವ ಕುತೂಹಲವು ಕಾರ್ಯಕರ್ತರಲ್ಲಿ ಇದೆ.

ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು ಕ್ಷೇತ್ರದಲ್ಲಿ ‍ಪ್ರಬಲ ಒಕ್ಕಲಿಗ, ರೆಡ್ಡಿ ಸಮುದಾಯದವರೇ ಅಭ್ಯರ್ಥಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನು ಉಳಿದದ್ದು ಚಿಕ್ಕಬಳ್ಳಾಪುರ ಕ್ಷೇತ್ರ ಮಾತ್ರ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಹಿಂದ ವರ್ಗಗಳಿಗೆ ಚಿಕ್ಕಬಳ್ಳಾಪುರದಲ್ಲಿ ಅವಕಾಶ ನೀಡುವರೇ ಎನ್ನುವ ಚರ್ಚೆಯೂ ಇದೆ.

ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಬಲಿಜಿಗ ಸಮುದಾಯ ಗಣನೀಯವಾಗಿ ಇದ್ದರೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸೋಲು ಗೆಲುವಿನಲ್ಲಿ ನಿರ್ಣಾಯಕ ‍ಪಾತ್ರವನ್ನು ವಹಿಸುವರು. ಅಹಿಂದ ವರ್ಗಗಳು ಒಗ್ಗಟ್ಟು ಕಾಯ್ದುಕೊಂಡರೆ ‘ಪ್ರಬಲ’ರನ್ನೇ ಮಣಿಸಲು ಅವಕಾಶವಿದೆ. ಈ ಕ್ಷೇತ್ರ 2008ಕ್ಕೂ ಪೂರ್ವದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT