ಬುಧವಾರ, ಫೆಬ್ರವರಿ 1, 2023
27 °C

ಶಿಡ್ಲಘಟ್ಟದ ಕಾಂಗ್ರೆಸ್ ಟಿಕೆಟ್ ತ್ಯಾಗಕ್ಕೆ ₹30 ಕೋಟಿ ಆಮಿಷ: ವಿ. ಮುನಿಯಪ್ಪ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ‘ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಿಟ್ಟುಕೊಡಲು ಎಬಿಡಿ ಟ್ರಸ್ಟ್‌ನ ರಾಜೀವ್‌ಗೌಡ ಅವರ ಕಡೆಯವರು ನನಗೆ ₹30 ಕೋಟಿ ಆಮಿಷವೊಡ್ಡಿದರು’ ಎಂದು ಹಾಲಿ ಶಾಸಕ ವಿ. ಮುನಿಯಪ್ಪ ಗಂಭೀರ ಆರೋಪ ಮಾಡಿದ್ದಾರೆ.

ವಿ.ಮುನಿಯಪ್ಪ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ವಿ. ಮುನಿಯಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. 

ಶಾಸಕ ವಿ. ಮುನಿಯಪ್ಪ ಅವರು ಈ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದು, ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಆದರೆ ಇತ್ತೀಚೆಗೆ ಎಬಿಡಿ ಟ್ರಸ್ಟ್‌ನ ಅಧ್ಯಕ್ಷ ರಾಜೀವ್‌ಗೌಡ, ಎಸ್‌ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಸಮಾಜ ಸೇವೆ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳತೊಡಗಿದ್ದಾರೆ. ಈ ಮೂವರಲ್ಲಿ ಪಕ್ಷದ ‘ಬಿ’ ಫಾರಂ ಯಾರಿಗೆ ಸಿಗುತ್ತದೆ ಎಂಬುದು ಗೊತ್ತಿಲ್ಲ. ಇದರಿಂದ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. 

‘ಕೊರೊನಾ ಸಮಯದಲ್ಲಿ ಸಮಾಜ ಸೇವೆ ಮಾಡುವ ನೆಪದಲ್ಲಿ ಕ್ಷೇತ್ರಕ್ಕೆ ದಿಢೀರ್ ಎಂದು ಬಂದ ರಾಜೀವ್ ಗೌಡ ಅವರು ಜನರಿಗೆ ₹500 ಮತ್ತು ₹1,000 ಕೊಟ್ಟಿದ್ದಾರೆ. ಅವರು ಕೊಟ್ಟಿದ್ದ ₹2,000 ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿವೆ ಎನ್ನಲಾಗಿದೆ. ರಾಜೀವ್ ವಿರುದ್ಧ ಮೂರು ಎಫ್ಐಆರ್ ದಾಖಲಾಗಿವೆ. ಈ ಕುರಿತು ನಾನು ಕೆಪಿಸಿಸಿಗೂ ದೂರು ಕೊಟ್ಟಿದ್ದೇನೆ’ ಎಂದು ವಿ. ಮುನಿಯಪ್ಪ ಅವರು ಹೇಳಿದ್ದಾರೆ. 

ಅದ್ಯಾರೋ ಪುಟ್ಟು ಅಂತೆ ಅವರು ಏನೋನೋ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪುಟ್ಟು ಅಂಜಿನಪ್ಪ ವಿರುದ್ಧವೂ ಪ್ರಸ್ತಾಪ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು