ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾಲ್ವಡಿ ಕೃಷ್ಣರಾಜ ಒಡೆಯರ್ ದೇವರ ಸಮಾನ’

ಕೆ.ಬಿ ಪಿಳ್ಳಪ್ಪ, ಅಂಗಡಿ ನಾರಾಯಣಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮ
Published 29 ಮೇ 2024, 14:03 IST
Last Updated 29 ಮೇ 2024, 14:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮೈಸೂರು ರಾಜ್ಯದ ಸರ್ವಾಂಗೀಣ ವಿಕಾಸಕ್ಕೆ ದುಡಿದ ನಾಲ್ವಡಿ ಕೃಷ್ಣರಾಜ ಒಡೆಯರು ರಾಜರು ಮಾತ್ರವಲ್ಲಿ ದೇವರ ಸಮಾನ ಎಂದು ಕೆಂಪೇಗೌಡ ಕಾನೂನು ಕಾಲೇಜಿನ ನಿರ್ದೇಶಕ ಡಾ.ಕೆ.ಪಿ ಶ್ರೀನಿವಾಸಮೂರ್ತಿ ತಿಳಿಸಿದರು. 

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ಕೆಂಪೇಗೌಡ ಕಾನೂನು ವಿದ್ಯಾಲಯದಲ್ಲಿ ಬುಧವಾರ ಕೆ.ಬಿ ಪಿಳ್ಳಪ್ಪ ಹಾಗೂ ಯಲುವಹಳ್ಳಿಯ ಅಂಗಡಿ ನಾರಾಯಣಪ್ಪ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಸಾಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಸಾಹಿತ್ಯ ಪೋಷಕರು, ನಾಡುನುಡಿ ಹಾಗೂ ಸಮಾಜ ಪರಿವರ್ತನಾ ಚಟುವಟಿಗೆ ಪೋಷಕರಾಗಿದ್ದ ಮಹನೀಯರನ್ನು ಸ್ಮರಿಸಿ ಗೌರವಿಸುತ್ತಿದೆ. ಇದು ಅಭಿನಂದನೀಯ. ಸಾಹಿತ್ಯ ಪರಿಷತ್ತಿನ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು. 

ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ನಮ್ಮ ತಂದೆ ಅವರನ್ನು ಸ್ಮರಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಹೆಮ್ಮ ಎನಿಸಿದೆ. ಇಂತಹ ಕಾರ್ಯಕ್ರಮಗಳು ಸಾಹಿತ್ಯ, ಸಂಸ್ಕೃತಿಯ ಕಲಿಕೆಗೆ ಅನುಕೂಲ ಆಗುತ್ತದೆ. ನಮ್ಮ ತಂದೆ ಕೆ.ಬಿ. ಪಿಳ್ಳಪ್ಪ ಅವರ ಬದುಕು ರೈತರಿಗೆ ಮಾದರಿ ಆಗಿದೆ ಎಂದರು.

ಯಲುವಹಳ್ಳಿಯ ಅಂಗಡಿ ನಾರಾಯಣಪ್ಪ ದತ್ತಿ ಕಾರ್ಯಕ್ರಮದ ದಾನಿಗಳಾದ  ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ನಮ್ಮಲ್ಲಿ ಅಭಿಪ್ರಾಯ ಬೇಧಗಳು, ಸೈದ್ಧಾಂತಿಕ ಭಿನ್ನತೆಗಳು ಇರಬಹುದು ಆದರೆ ನಾವೆಲ್ಲರೂ ಜಾತಿ, ಮತ, ಧರ್ಮ, ಭಾಷೆಗಳನ್ನು ಮೀರಿ ಸೌಹಾರ್ದವಾಗಿ ಬಾಳಬೇಕು. ಈ ದಿಕ್ಕಿನಲ್ಲಿ ನನ್ನ ತಂದೆಯ ಜೊತೆಗೆ ಗುರುವಾಗಿ ಪಿಳ್ಳಪ್ಪ ಅವರು ನಮ್ಮಂತ ಅನೇಕರಿಗೆ ಮಾರ್ಗದರ್ಶರಾಗಿದ್ದರು ಎಂದು ಸ್ಮರಿಸಿದರು. 

ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಚಿನ್ನಪ್ಪ ರೆಡ್ಡಿ, ರೈತರನ್ನು ಶೋಷಣೆಗಳಿಂದ ಮುಕ್ತಗೊಳಿಸಿ ಆರ್ಥಿಕ ಸ್ವಾವಲಂಬನೆ, ಸಬಲೀಕರಣಗೊಳಿಸುವಲ್ಲಿ ಪಿಳ್ಳಪ್ಪ ಅವರು ಪ್ರೇರಕ ಶಕ್ತಿಯಾಗಿದ್ದರು. ಇಂತಹ ವ್ಯಕ್ತಿಗಳನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ,  ಹಿರಿಯರು ಸೃಷ್ಟಿಸಿರುವ ಸಾಹಿತ್ಯ, ಸಂಸ್ಕೃತಿಯ ಚಿಂತನೆ, ಹೋರಾಟಗಳನ್ನು ನಾವು ಮರೆಯದೆ ಸಮಕಾಲೀನ ಸಮಾಜಕ್ಕೆ ಹಾಗೂ ನಾಳಿನ ನಾಯಕರಾಗುವವರೆಗೆ ತಲುಪಿಸಬೇಕು. ಈ ದೃಷ್ಟಿಯಿಂದ ಹಾಗೂ ಓದುವ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕುವ ಕಿರು ಪ್ರಯತ್ನವನ್ನು ಪರಿಷತ್ತು ಮಾಡುತ್ತಿದೆ ಎಂದು ಹೇಳಿದರು. 

ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಆಶಯ ಭಾಷಣ ಮಾಡಿದರು. 

ಕಾರ್ಯಕ್ರಮದ ಅಂಗವಾಗಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ‘ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಕಾನೂನು ಶಿಕ್ಷಣ ಪದವಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆದು ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಮತ್ತು ಅಭಿನಂದನಾ ಪತ್ರ ನೀಡಲಾಯಿತು. 

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎನ್. ಅಮೃತ್‍ಕುಮಾರ್, ಕೆ.ಎಂ ರೆಡ್ಡಪ್ಪ, ತತ್ತೂರು ಲೋಕೇಶ್, ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ ಶೋಭಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT