ಚಿಕ್ಕಬಳ್ಳಾಪುರ: ‘ಸಿದ್ದರಾಮಯ್ಯ ಅವರೇ ಅಹಿಂದ ಚಳವಳಿಯ ಬೆಳ್ಳಿತಟ್ಟೆಯಲ್ಲಿ ಅಧಿಕಾರ ಉಂಡಿದ್ದೀರಿ. ಈ ಚಳವಳಿ ನಿಮಗೆ ಅಧಿಕಾರ ಕೊಟ್ಟಿದೆ. ಆದರೆ ನೀವು ಯಾವುದೇ ಶ್ರಮಪಟ್ಟಿಲ್ಲ. ದೇವರಾಜ ಅರಸು ಅವರಂತೆ ಜನನಾಯಕರಲ್ಲ. ದಲಿತ ಸಮುದಾಯದ ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಅಷ್ಟೂ ಹಣವನ್ನು ಪರಿಶಿಷ್ಟ ಸಮುದಾಯಗಳಿಗೆ ವಾಪಸ್ ತಂದುಕೊಡಬೇಕು. ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕವಾದ ಬಜೆಟ್ ಮಂಡಿಸಬೇಕು’ ಎಂದು ಆಗ್ರಹಿಸಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕು. ನೀವು ಮಾಡಿರುವ ದ್ರೋಹಕ್ಕೆ ಪರಿಶಿಷ್ಟ ಸಮುದಾಯದ ನಮ್ಮ ಮಕ್ಕಳು ಅಭಿವೃದ್ಧಿ ವಿಚಾರದಲ್ಲಿ ಎರಡು ತಲೆಮಾರು ಹಿಂದಕ್ಕೆ ಹೋಗುವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಣ್ಣಾಮುಚ್ಚಾಲೆ ಆಡುವುದು ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ಭಾಷೆ ಸರಿ ಇಲ್ಲ. ದಲಿತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಕುಟುಂಬಗಳನ್ನು ಬೆಳೆಸುತ್ತಿದೆ. ಕೆ.ಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಮೋಟಮ್ಮ ಅವರ ಕುಟುಂಬ ಬೆಳೆಸುತ್ತಿದ್ದೀರಿ. ಇವರು ದಲಿತ ಚಳವಳಿಗಳಿಗೆ ಬೆವರು ಹರಿಸಿಲ್ಲ. ದಲಿತ ಚಳವಳಿ ಈ ನೆಲದಲ್ಲಿ ದೊಡ್ಡ ತ್ಯಾಗ ಮಾಡಿದೆ. ಇವರಿಗೆ ನಾಯಕತ್ವ ನೀಡಬೇಕಾಗಿತ್ತು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎಂದರು.
ಒಳಮೀಸಲಾತಿ ಹೆಸರಿನಲ್ಲಿ 30 ವರ್ಷಗಳಿಂದ ಪರಿಶಿಷ್ಟ ಸಮುದಾಯವನ್ನು ಎಡಗೈ, ಬಲಗೈ ಎಂದು ವಿಭಜಿಸಿದರು. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಚರಿತ್ರಾರ್ಹವಾದುದು ಎಂದರು.
ಉನ್ನತ ಹುದ್ದೆಗಳಲ್ಲಿರುವ ನಮ್ಮ ಸಮುದಾಯದವರು ಸಮುದಾಯಕ್ಕೆ ಏನು ಮಾಡದೇ ಇರಲಿ. ದ್ರೋಹ ಮಾಡಲಿ ಚಿಂತೆಯಿಲ್ಲ. ಆದರೆ ಕೆನೆಪದರವನ್ನು ಜಾರಿಗೊಳಿಸಬಾರದು ಎಂದರು.