ಮಂಗಳವಾರ, ಏಪ್ರಿಲ್ 7, 2020
19 °C
ನಗರದಾದ್ಯಂತ ಅರಿವು ಮೂಡಿಸಲು ಮುಂದಾದ ನಗರಸಭೆ ಅಧಿಕಾರಿಗಳು, ವಾರ್ಡ್‌ಗಳಲ್ಲಿ ಸೋಂಕು ನಾಶಕ ಸಿಂಪಡಣೆ

ಮಾಂಸ ಮಾರಾಟ ಮಳಿಗೆಗಳಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನಗರಸಭೆ ಅಧಿಕಾರಿಗಳು ನಗರದ ಮಾಂಸ ಮಾರಾಟದ ಮಳಿಗೆಗಳಿಗೆ ಗುರುವಾರ ಬೀಗ ಜಡಿದರು. ಜತೆಗೆ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಾಶಕ ರಾಸಾಯನಿಕ ಔಷಧ ಸಿಂಪಡಣೆ ಕಾರ್ಯ ನಡೆಸಿದರು.

ಜಿಲ್ಲೆಯಲ್ಲಿ ಕೊರೊನಾ ಭೀತಿ ಮುಂದುವರೆದಿದ್ದು, ಇದರ ಪರಿಣಾಮ ನಗರದಲ್ಲಿ ಮಾಂಸ ಮಾರುಕಟ್ಟೆಯ ಮೇಲೆ ತೀವ್ರ ಹೊಡೆತ ಬಿದ್ದಿದೆ. ಚಿಕನ್‌ ಮತ್ತು ಮಟನ್ ಮಳಿಗೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ನಗರಸಭೆಯ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿರುವ ಮಾಂಸದ ಮಳಿಗೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಬೀಗ ಜಡಿದಿದ್ದಾರೆ.

ಕೊರೊನಾ ವೈರಸ್ ಸೋಂಕು ಭೀತಿಯಿಂದ ಜನರು ಮಾಂಸ ಸೇವನೆ ಕೈಬಿಟ್ಟಿರುವುದರಿಂದ ಕಳೆದ ಒಂದು ವಾರದಿಂದ ಕೋಳಿ, ಕುರಿ ಮಾಂಸದ ವ್ಯಾಪಾರಕ್ಕೆ ಗ್ರಹಣ ಬಡಿದಿತ್ತು. ಈಗ ಅಂಗಡಿಗಳು ಸಂಪೂರ್ಣ ಮುಚ್ಚಿದ್ದು, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿದೆ.

ನಗರಸಭೆ ಅಧಿಕಾರಿಗಳು ರಾತ್ರಿ ವೇಳೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಸೋಂಕು ನಾಶಕ ಸಿಂಪಡಣೆ ಕಾರ್ಯ ಚುರುಕುಗೊಳಿಸಿದ್ದು, ಇನ್ನೊಂದೆಡೆ ನಗರದಾದ್ಯಂತ ಬೀದಿ ವ್ಯಾಪಾರಿಗಳಿಗೆ, ವರ್ತಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಲೋಹಿತ್, ‘ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧ ಸಿಂಪಡಣೆ ಮಾಡುತ್ತಿದ್ದೇವೆ. ಜನರು ಕೂಡಾ ಇಲಾಖೆ ಹೊರಡಿಸಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡಬೇಕು’ ಎಂದು ಹೇಳಿದರು.

‘ಕೊರೊನಾ ವೈರಸ್ ಸೋಂಕು ವ್ಯಾಪಕವಾಗದಂತೆ ತಡೆಯಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜತೆಗೆ ವ್ಯಾಪಾರಿಗಳು, ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮಳಿಗೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ತೆರೆದಿಟ್ಟ ತಿಂಡಿತಿನಿಸು, ಕತ್ತರಿಸಿದ ಹಣ್ಣುಗಳನ್ನು ಯಾವುದೇಕಾರಣಕ್ಕೂ ಮಾರುವಂತಿಲ್ಲ. ತಟ್ಟೆಲೋಟ, ಚಮಚೆ ಬಳಸಿ ತಿನ್ನುವ ವಸ್ತುಗಳನ್ನು ಮತ್ತು ಪಾನಿಪೂರಿ ಇತ್ಯಾದಿ ಫಾಸ್ಟ್‌ಫುಡ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಬೀದಿಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸಿದ್ದೆವೆ. ಈ ಬಗ್ಗೆ ಧ್ವನಿವರ್ಧಕದ ಮೂಲಕವೂ ನಗರದಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದರು.

ಈ ನಡುವೆ ಮಾರುಕಟ್ಟೆ ವಹಿವಾಟಿನ ಮೇಲೆ ಕೊರೊನಾ ಕರಿನೆರಳು ಬಿದ್ದಿದ್ದು, ಸೋಂಕು ಹರಡುವ ಭೀತಿ, ಜನರನ್ನು ಖರೀದಿಯಿಂದ ದೂರವಿರಿಸಿದೆ. ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ವ್ಯಾಪಾರಿಗಳು ಹಾಗೂ ರೈತರು ಕಳೆದೊಂದು ವಾರದಿಂದ ವ್ಯಾಪಾರ ಕಡಿಮೆಯಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು