ಗುರುವಾರ , ಮೇ 13, 2021
16 °C
ಬೆಲೆ, ಮಾರುಕಟ್ಟೆ ಇಲ್ಲದೆ ಕಂಗಾಲು

ಪಾತಿ ಸೇರಿದ ಸೀಬೆ: ಬೆಳೆಗಾರನಿಗೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸೀಬೆ ಹಣ್ಣಿಗೆ ಬೆಲೆ ಮತ್ತು ಮಾರುಕಟ್ಟೆ ಇಲ್ಲದೆ ಕಂಗಾಲಾಗಿರುವ ತಾಲ್ಲೂಕಿನ ಚೊಕ್ಕಹಳ್ಳಿಯ ರೈತ ರಾಜಣ್ಣ ಹಣ್ಣುಗಳನ್ನು ಸೀಬೆ ಗಿಡಗಳ ಬುಡದಲ್ಲಿ ಪಾತಿ ಮಾಡಿ ಅವುಗಳನ್ನು ಮಣ್ಣಿಗೆ ಸೇರಿಸುತ್ತಿದ್ದಾರೆ. ಖರ್ಚು ಮಾಡಿದ ಬಂಡವಾಳವೂ ಅವರಿಗೆ ವಾಪಸಾಗದ ಸ್ಥಿತಿ ಎದುರಾಗಿದೆ.

ಎರಡು ದಿನಗಳ ಹಿಂದೆ ತಲಾ 22 ಕೆ.ಜಿಯ 32 ಕ್ರೇಟ್‌ ಸೀಬೆ ಹಣ್ಣನ್ನು ಮಾರಾಟಕ್ಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಸರಕನ್ನು ಯಾರೂ ಖರೀದಿಸಿಲ್ಲ. ಅಂತಿಮವಾಗಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಎಲ್ಲ ಹಣ್ಣನ್ನು ₹ 2 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.

‘ವಾಹನದ ಬಾಡಿಗೆಯೇ ₹ 2,500. ಕನಿಷ್ಠ ಬಾಡಿಗೆ ಹಣವೂ ಬರಲಿಲ್ಲ. ಹಣ್ಣು ಕೀಳಲು 12 ಕೂಲಿ ಕಾರ್ಮಿಕರಿಗೆ ತಲಾ ₹ 250 ನೀಡಿದ್ದೆ. ಎಲ್ಲವೂ ನಷ್ಟವಾಯಿತು. ಇದರಿಂದ ಬೇಸರಗೊಂಡು ಹಣ್ಣನ್ನು ಕೀಳಿಸಿ ಗಿಡಗಳ ಬುಡಕ್ಕೆ ಹಾಕಿಸುತ್ತಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸುವರು ರಾಜಣ್ಣ. ಅವರ ಒಂದೂವರೆ ಎಕರೆ ಜಮೀನಿನಲ್ಲಿ ಅಲಹಾಬಾದ್ ತಳಿಯ ಮುನ್ನೂರು ಸೀಬೆ|
ಮರಗಳಿವೆ.

ಔಷಧಿ, ಕೆಮ್ಮಣ್ಣ, ಕಡಲೇಕಾಯಿ ಹಿಂಡಿ, ಬೇವಿನ ಹಿಂಡಿಗೆ ಹಣ ಖರ್ಚು ಮಾಡಿದ್ದೆ. ಕಳೆದ ವರ್ಷವೂ ಕೊರೊನಾ ಕಾರಣದಿಂದ ನಷ್ಟವಾಯಿತು. ಈ ಬಾರಿಗೂ ಇದೇ ಕಥೆ. ಹೀಗೆ ಆದರೆ ಗಿಡೆಗಳನ್ನೇ ಕೀಳಿಸುವೆ ಎನ್ನುತ್ತಾರೆ ಅವರು.

ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಶಾಲೆಗಳು ಪೂರ್ಣವಾಗಿ ಆರಂಭವಾಗಿದ್ದರೆ ಅನುಕೂಲವಾಗುತ್ತಿತ್ತು. ಈಗ ಮೂರು ವರ್ಷದ ಹಿಂದೆ ಮೂರೂವರೆ ಲಕ್ಷ ಲಾಭ ಬಂದಿತ್ತು. ಇದರಿಂದ ಮತ್ತಷ್ಟು ಬಂಡವಾಳ ಹೂಡಿದೆ. ಆದರೆ ಆ ಬಂಡವಾಳ ವಾಪಸ್ ಪಡೆಯಲು ಸಾಧ್ಯವಾಗಿಲ್ಲ ಎಂದು ನೋವು ತೋಡಿಕೊಂಡರು. 

ಹಿಂದಿನ ವರ್ಷ ಲಾಕ್‌ಡೌನ್ ಸಮಯದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ರಹದಾರಿಯಾಗಿದ್ದರು. ಹೊರರಾಜ್ಯಗಳಿಗೆ ಮತ್ತು ಸರಕು ಅಗತ್ಯವಿದ್ದವರನ್ನು ಕರೆ ತಂದು ರೈತರ ಜತೆ ಸಂಪರ್ಕಿಸುತ್ತಿದ್ದರು. ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೀರಾ ಎಂದರೆ ರಾಜಣ್ಣ ಅಸಮಾಧಾನ ವ್ಯಕ್ತಪಡಿಸುವರು.

‘ಯಾವ ಅಧಿಕಾರಿಗಳೂ ಬಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮಾರಾಟದ ಮಾರ್ಗ ಅಥವಾ ಯಾವುದೇ ಸಲಹೆಗಳನ್ನು ನೀಡಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು