ಚಿಕ್ಕಬಳ್ಳಾಪುರ: ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ಜ.29ರವರೆಗೆ ಚರ್ಮಗಂಟು ರೋಗದಿಂದ 460 ರಾಸುಗಳು ಮೃತಪಟ್ಟಿವೆ. ಮೃತರ ರಾಸುಗಳ ಪೈಕಿ ಸರ್ಕಾರ 249 ರಾಸುಗಳಿಗೆ ಮಾತ್ರ ಪರಿಹಾರ ವಿತರಿಸಿದೆ! ಅಲ್ಲದೆ ಡಿಸೆಂಬರ್ ನಂತರ ಜಿಲ್ಲೆಯಲ್ಲಿ ಮೃತಪಟ್ಟ ರಾಸುಗಳಿಗೆ ಬಿಡಿಗಾಸು ಪರಿಹಾರ ಸಹ ವಿತರಿಸಿಲ್ಲ.
ಸರ್ಕಾರ ಚರ್ಮಗಂಟು ರೋಗದಿಂದ ಮೃತಪಡುವ ರಾಸುಗಳಿಗೆ ಪರಿಹಾರ ಧನ ನೀಡುತ್ತಿದೆ. ಮೃತ ಕರುವಿಗೆ ₹ 5 ಸಾವಿರ, ಎಮ್ಮೆ, ಹಸುವಿಗೆ ₹ 20 ಸಾವಿರ ಮತ್ತು ಎತ್ತು ಮೃತಪಟ್ಟರೆ ₹ 30 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ.
ಈ ಪ್ರಕಾರ ಜಿಲ್ಲೆಯಲ್ಲಿ 2022ರ ಡಿ.18ರ ವೇಳೆಗೆ 333 ರಾಸುಗಳು ರೋಗಕ್ಕೆ ಬಲಿಯಾಗಿದ್ದವು. ಆಗ 249 ರಾಸುಗಳಿಗೆ ₹ 47.65 ಲಕ್ಷ ಪರಿಹಾರ ಧನ ಬಿಡುಗಡೆ ಮಾಡಲಾಗಿತ್ತು. ಉಳಿದ ರಾಸುಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ಪಶುಸಂಗೋಪನಾ ಇಲಾಖೆ ಮೂಲಗಳು ತಿಳಿಸಿದ್ದವು. ಆದರೆ ಇಲ್ಲಿಯವರೆಗೂ ಪರಿಹಾರದ ಹಣ ಬಿಡುಗಡೆಯೇ ಆಗಿಲ್ಲ!
ಜಿಲ್ಲೆಯಲ್ಲಿ ಸದ್ಯ ಮೃತಪಟ್ಟ 53 ಕರುಗಳು ₹ 2,65,000, ಮೃತ 138 ಹಸುಗಳಿಗೆ 27,60,000, ಮೃತ 58 ಎತ್ತುಗಳಿಗೆ 17,40,000 ಪರಿಹಾರದ ಹಣ ಬಿಡುಗಡೆ ಆಗಿದೆ.
ಬಿಡುಗಡೆಯಾದ ಹಣ: ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮೃತ 9 ಕರುಗಳು, 16 ಹಸುಗಳು, 11 ಎತ್ತುಗಳು ಸೇರಿ ಒಟ್ಟು 36 ಜಾನುವಾರುಗಳಿಗೆ ₹ 6,95,000 ಪರಿಹಾರ ಧನ ವಿತರಿಸಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 11 ಕರುಗಳು, 30 ಹಸುಗಳು, 11 ಎತ್ತುಗಳು ಸೇರಿ ಒಟ್ಟು 52 ಜಾನುವಾರುಗಳಿಗೆ ₹ 9,85,000 ಪರಿಹಾರ ಧನ , ಚಿಂತಾಮಣಿ ತಾಲ್ಲೂಕಿನಲ್ಲಿ 6 ಕರುಗಳು, 14 ಹಸುಗಳು, 2 ಎತ್ತುಗಳು ಸೇರಿ ಒಟ್ಟು 22 ಜಾನುವಾರುಗಳಿಗೆ ₹ 3,70,000 ಪರಿಹಾರ ಧನ ವಿತರಿಸಲಾಗಿದೆ.
ಗೌರಿಬಿದನೂರು ತಾಲ್ಲೂಕಿನಲ್ಲಿ 5 ಕರುಗಳು, 35 ಹಸುಗಳು, 18 ಎತ್ತುಗಳು ಸೇರಿ ಒಟ್ಟು 58 ಜಾನುವಾರುಗಳಿಗೆ ₹ 12,65,000, ಗುಡಿಬಂಡೆ ತಾಲ್ಲೂಕಿನಲ್ಲಿ 7 ಕರುಗಳು, 9 ಹಸುಗಳು, 6 ಎತ್ತುಗಳು ಸೇರಿ ಒಟ್ಟು 22 ಜಾನುವಾರುಗಳಿಗೆ ₹ 3,95,000, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15 ಕರುಗಳು, 34 ಹಸುಗಳು, 10 ಎತ್ತುಗಳು ಸೇರಿ ಒಟ್ಟು 59 ಜಾನುವಾರುಗಳಿಗೆ ₹ 10,55,000 ಪರಿಹಾರ ಧನ ನೀಡಲಾಗಿದೆ.
2022ರ ಅಕ್ಟೋಬರ್ ಮೊದಲ ವಾರದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ರೋಗಕ್ಕೆ ರಾಸು ಮೃತಪಟ್ಟಿತ್ತು. ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರು ಬಲಿಯಾದ ಮೊದಲ ಪ್ರಕರಣ ಇದು. ನಂತರ ಒಂದೇ ವಾರದ ಅಂತರದಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ರಾಸುಗಳು ಮೃತಪಟ್ಟವು. ಹಂತ ಹಂತವಾಗಿ ಜಿಲ್ಲೆಯಲ್ಲಿ ರೋಗ ಮತ್ತು ರೋಗಪೀಡಿತ ಗ್ರಾಮಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.
ಸದ್ಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ 109 ಗ್ರಾಮಗಳಲ್ಲಿ, ಚಿಕ್ಕಬಳ್ಳಾಪುರ ತಾಲ್ಲೂಕಿನ 220 ಹಳ್ಳಿಗಳಲ್ಲಿ, ಚಿಂತಾಮಣಿಯ 233, ಗೌರಿಬಿದನೂರಿನ 140, ಗುಡಿಬಂಡೆಯ 78 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 179 ಸೇರಿದಂತೆ ಒಟ್ಟು 959 ಹಳ್ಳಿಗಳಲ್ಲಿ ಚರ್ಮಗಂಟು ರೋಗ ವ್ಯಾಪಿಸಿದೆ. ಒಂದೆಡೆ ರಾಸುಗಳು ಮೃತಪಡುತ್ತಿದ್ದರೆ 280 ರಾಸುಗಳು ಚಿಕಿತ್ಸೆಯಲ್ಲಿವೆ. ಜಿಲ್ಲೆಯಲ್ಲಿ ಶೇ 74ರಷ್ಟು ರಾಸುಗಳಿಗೆ ಚರ್ಮಗಂಟು ರೋಗ ತಡೆಯ ಲಸಿಕೆಯನ್ನು ಹಾಕಲಾಗಿದೆ.
***
ಅಂಕಿ ಅಂಶ
2,40,021
ಜಿಲ್ಲೆಯಲ್ಲಿರುವ ಒಟ್ಟು ಜಾನುವಾರುಗಳ ಸಂಖ್ಯೆ
1,78,426
ಚರ್ಮಗಂಟು ರೋಗ ತಡೆಗೆ ಲಸಿಕೆ ಹಾಕಿಸಿಕೊಂಡಿರುವ ಜಾನುವಾರುಗಳ ಸಂಖ್ಯೆ
959
ಚರ್ಮಗಂಟು ರೋಗಪೀಡಿತ ಗ್ರಾಮಗಳು
5,984
ರೋಗಕ್ಕೆ ತುತ್ತಾದ ಜಾನುವಾರುಗಳು
5,244
ಗುಣಮುಖವಾದ ರಾಸುಗಳು
***
ತಾಲ್ಲೂಕು;ಸಾವು;ಪರಿಹಾರ ವಿತರಣೆ
ಬಾಗೇಪಲ್ಲಿ;68;36
ಚಿಕ್ಕಬಳ್ಳಾಪುರ;81;52
ಚಿಂತಾಮಣಿ;75;22
ಗೌರಿಬಿದನೂರು;99;58
ಗುಡಿಬಂಡೆ;30;22
ಶಿಡ್ಲಘಟ್ಟ;107;59
ಒಟ್ಟು;460;249
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.