ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು ಮರೆತರೇ ಸಚಿವರು!

9 ತಿಂಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರಿಂದ ನಡೆಯದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ
Published 12 ಜನವರಿ 2024, 5:39 IST
Last Updated 12 ಜನವರಿ 2024, 5:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಗೌರಿಬಿದನೂರು ಸಹ ಒಂದು. ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಜಿಲ್ಲೆಯ ಪ್ರಮುಖ ತಾಲ್ಲೂಕು ಎನಿಸಿದೆ. ಇಂತಹ ತಾಲ್ಲೂಕನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮರೆತರೇ ಎನ್ನುವ ಭಾವನೆ ಇಲ್ಲಿನ ರೈತ ಸಂಘದ ಮುಖಂಡರು, ಹೋರಾಟಗಾರರು, ಅಧಿಕಾರಿಗಳ ವಲಯಯಲ್ಲಿ ಮೂಡಿದೆ.

ಡಾ.ಎಂ.ಸಿ.ಸುಧಾಕರ್ ಸಚಿವರಾಗಿ 9 ತಿಂಗಳಾಗಿದೆ. ಆದರೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಒಂದೇ ಒಂದು ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಿಲ್ಲ. ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸಮುದಾಯ ಭವನಗಳು, ಶಾಲಾ ಕೊಠಡಿಗಳು ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ ಬಾಕಿ ಇದೆ. 

34 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಗೌರಿಬಿದನೂರು ದೊಡ್ಡ ತಾಲ್ಲೂಕು ಎನಿಸಿದೆ. ನಗರವು ಸಹ ವೇಗವಾಗಿ ಬೆಳೆಯುತ್ತಿದೆ. ಐತಿಹಾಸಿಕ ವಿದುರಾಶ್ವತ್ಥ, ವಿಜ್ಞಾನ ಪಾರ್ಕ್, ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಹೀಗೆ ಹಲವು ಪ್ರಮುಖ ಸ್ಥಳಗಳು ತಾಲ್ಲೂಕಿನಲ್ಲಿ ಇವೆ. ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಹೆಚ್ಚು ಚಟುವಟಿಕೆಗಳು ನಡೆಯುವುದು ಸಹ ಇದೇ ತಾಲ್ಲೂಕಿನಲ್ಲಿ. 

ಸುಧಾಕರ್ ಅವರು ಸ್ವಕ್ಷೇತ್ರ ಚಿಂತಾಮಣಿ ಮತ್ತು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ವಿಚಾರವಾಗಿ ತೋರುತ್ತಿರುವ ಮುತುವರ್ಜಿಯನ್ನು ಮತ್ತೊಂದು ಕ್ಷೇತ್ರ ಗೌರಿಬಿದನೂರಿನ ಮೇಲೆ ತೋರುತ್ತಿಲ್ಲ ಎಂದು ಈ ತಾಲ್ಲೂಕಿನ ಪ್ರಜ್ಞಾವಂತರು ಆರೋಪಿಸುವರು. ಅವರ ಆರೋಪಗಳಿಗೆ ಪುಷ್ಠಿ ಎನ್ನುವಂತೆ ಸಚಿವರು ಈ 9 ತಿಂಗಳಲ್ಲಿ ಎರಡು ಮೂರು ಬಾರಿ ಮಾತ್ರ ಗೌರಿಬಿದನೂರಿಗೆ ಭೇಟಿ ನೀಡಿದ್ದಾರೆ. ತಾಲ್ಲೂಕು ಮಟ್ಟದ ಇಲಾಖೆಗಳ ಕಾರ್ಯವೈಖರಿಯ ಪ್ರಗತಿ ಪರಿಶೀಲನೆಯಂತೂ ಮಾಡಿಯೇ ಇಲ್ಲ. ಅವರ ಸರ್ಕಾರಿ ಪ್ರವಾಸದ ವೇಳಾಪಟ್ಟಿ ಮತ್ತು ಮಾಹಿತಿ ಗಮನಿಸಿದರೆ ಇದು ವೇದ್ಯವಾಗುತ್ತದೆ. 

ಚಿಕ್ಕಬಳ್ಳಾಪುರ ಅತ್ಯಂತ ದೊಡ್ಡ ಜಿಲ್ಲೆಯೇನೂ ಅಲ್ಲ. ಇರುವುದು ಐದೇ ವಿಧಾನಸಭಾ ಕ್ಷೇತ್ರಗಳು. ಹೀಗಿದ್ದರೂ ಗೌರಿಬಿದನೂರು ಕ್ಷೇತ್ರಕ್ಕೆ ತಿಂಗಳಿಗೆ ಒಮ್ಮೆಯೂ ಸಚಿವರು ಭೇಟಿ ನೀಡುವ ಮನಸ್ಸು ಮಾಡಿಲ್ಲ. ಸಾಮಾನ್ಯವಾಗಿ ಯಾವುದೇ ಒಂದು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಇಡೀ ಜಿಲ್ಲೆಯ ಆಡಳಿತ ಯಂತ್ರಾಂಗದ ಮೇಲೆ ಹಿಡಿತ ಅಗತ್ಯ. ಪ್ರತಿ ಕ್ಷೇತ್ರಗಳಿಗೂ ಸಚಿವರು ಭೇಟಿ ನೀಡಿದಾಗ ಅಲ್ಲಿನ ಜನ ಸಾಮಾನ್ಯರು, ರೈತರು ಸಮಸ್ಯೆಗಳ ಅಹವಾಲುಗಳನ್ನು ಸಲ್ಲಿಸುವರು. ಕುಂದುಕೊರತೆಗಳು ಖುದ್ದು ಗಮನಕ್ಕೆ ಬರುತ್ತವೆ.  

ರಾಜಕೀಯ ಕಾರಣವೇ?: ಗೌರಿಬಿದನೂರು ಮಾಜಿ ಶಾಸಕ ಶಿವಶಂಕರ ರೆಡ್ಡಿ ಅವರು ಡಾ.ಎಂ.ಸಿ.ಸುಧಾಕರ್ ಅವರ ಅತ್ಯಾಪ್ತರು. ಒಂದು ಮಟ್ಟದಲ್ಲಿ ರಾಜಕೀಯವಾಗಿ ಗುರುಗಳಿದ್ದಂತೆ. ಆದರೆ ಇವರ ವಿರುದ್ಧ ಪಕ್ಷೇತರರಾದ ಪುಟ್ಟಸ್ವಾಮಿ ಗೌಡ ಗೆಲುವು ಸಾಧಿಸಿದ್ದಾರೆ. ಈ ಕಾರಣದಿಂದ ಸಚಿವರು ಗೌರಿಬಿದನೂರು ಕ್ಷೇತ್ರದಲ್ಲಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದ ರೀತಿಯಲ್ಲಿ ಬಿರುಸಿನ ಓಡಾಟವನ್ನು ಮಾಡುತ್ತಿಲ್ಲವೇ ಎನ್ನುವ ಪ್ರಶ್ನೆ ತಾಲ್ಲೂಕಿನ ನಾಗರಿಕರಲ್ಲಿ ಇದೆ.

ಸಚಿವರು ಇನ್ನಾದರೂ ಗೌರಿಬಿದನೂರು ತಾಲ್ಲೂಕಿಗೆ ಭೇಟಿ ನೀಡಿ ಇಲಾಖೆಗಳ ಸಭೆ ನಡೆಸಬೇಕು. ಸಮಸ್ಯೆಗಳ ಕುರಿತು ಅಹವಾಲು ಆಲಿಸಬೇಕು ಎನ್ನುವುದು ಈ ತಾಲ್ಲೂಕಿನ ರೈತ ಮುಖಂಡರು, ಹೋರಾಟಗಾರರ ಆಗ್ರಹವಾಗಿದೆ.

ಡಾ.ಎಂ.ಸಿ.ಸುಧಾಕರ್
ಡಾ.ಎಂ.ಸಿ.ಸುಧಾಕರ್

Cut-off box - ‘ಮಲತಾಯಿ ಧೋರಣೆ’ ಗೌರಿಬಿದನೂರು ಶಾಸಕರಾದ ಪುಟ್ಟಸ್ವಾಮಿ ಗೌಡ ಅವರು ಪಕ್ಷೇತರರಾಗಿ ಗೆದ್ದಿದ್ದರೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಗೌರಿಬಿದನೂರು ಕ್ಷೇತ್ರಕ್ಕೆ ಬರುತ್ತಿಲ್ಲ. ಈ ಮಲತಾಯಿ ಧೋರಣೆಯನ್ನು ನಿಲ್ಲಿಸಿ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಬೇಕು.  ಸುಧಾಕರ್ ಅವರು ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರು. ರಾಜಕೀಯ ಬದಿಗೊತ್ತಿ ಸರ್ಕಾರಿ ಸಾರ್ವಜನಿಕ ಮತ್ತು ರೈತರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬರಬೇಕು ಎನ್ನುವುದು ನಮ್ಮ ಮನವಿ. ನಾವು ಸಚಿವರ ಗಮನಕ್ಕೆ ಯಾವುದೇ ಸಮಸ್ಯೆಗಳನ್ನು ತರಬೇಕು ಎಂದರೂ ಕಷ್ಟಸಾಧ್ಯವಾಗುತ್ತಿದೆ.  ಲೋಕೇಶ್ ಗೌಡ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗೌರಿಬಿದನೂರು *** ‘ನಿರ್ಲಕ್ಷ್ಯ ಭಾವನೆ’ ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಗುಡಿಬಂಡೆ ಸಹ ಒಂದು. ಇಲ್ಲಿನ ಜನಸಂಖ್ಯೆಯಲ್ಲಿ ಶೇ 50ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇದ್ದಾರೆ. ಎಂ.ಸಿ.ಸುಧಾಕರ್ ಅವರು ಸಚಿವರಾಗಿ 9 ತಿಂಗಳಾಗಿದೆ. ಆದರೆ ಒಮ್ಮೆಯೂ ತಾಲ್ಲೂಕಿಗೆ ಭೇಟಿ ನೀಡಿಲ್ಲ. ತೀರಾ ನಿರ್ಲಕ್ಷ್ಯ ಭಾವನೆ ತಾಳಿದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೂ ಗುಡಿಬಂಡೆಗೆ ತಾಲ್ಲೂಕು ಕೇಂದ್ರವಾಗಿ ಸ್ವಂತ ಅಸ್ತಿತ್ವವಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರೆ ಸಮಸ್ಯೆಗಳು ಅರಿವಿಗೆ ಬರುತ್ತಿದ್ದವು. ನಾವು ಸಹ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆಯುತ್ತಿದ್ದೆವು.  ಜಿ.ವಿ.ಗಂಗಪ್ಪ ಜಿಲ್ಲಾ ಸಂಘಟನಾ ಸಂಚಾಲಕ ದಸಂಸ ಗುಡಿಬಂಡೆ

Cut-off box - ಗುಡಿಬಂಡೆಯದ್ದೂ ಇದೇ ಕಥೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಗುಡಿಬಂಡೆ ತಾಲ್ಲೂಕು ಕೇಂದ್ರಕ್ಕೂ ಡಾ.ಎಂ.ಸಿ.ಸುಧಾಕರ್ ಸಚಿವರಾದ ಮೇಲೆ ಒಮ್ಮೆಯೂ ಭೇಟಿ ನೀಡಿಲ್ಲ. ನೆಪಮಾತ್ರಕ್ಕಾದರೂ ಒಂದೇ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಗುಡಿಬಂಡೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT