ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಿ

ಬಿಜಿಎಸ್ ವರ್ಲ್ಡ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
Last Updated 11 ಜನವರಿ 2020, 12:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ಆದ್ದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ತಮ್ಮಲ್ಲಿರುವ ಕೆಟ್ಟ ಬುದ್ಧಿಯನ್ನು ತೊರೆದು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಬೆಳೆಯುತ್ತಾ ಮಕ್ಕಳು ಕೂಡ ಅದನ್ನೇ ಅನುಕರಿಸುತ್ತಾರೆ’ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಲಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.

ನಗರ ಹೊರವಲಯ ಬಿಜಿಎಸ್ ವರ್ಲ್ಡ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜ್ಞಾನ ಎಂಬುದು ಯಾರ ಸ್ವತ್ತಲ್ಲ. ಅನುಕರಿಸುತ್ತಲೇ ಕಲೆಯುವ ಕಲೆಯೇ ವಿದ್ಯೆ. ಮಕ್ಕಳಲ್ಲಿ ಜ್ಞಾನವೆಂಬ ಶಕ್ತಿ ಹೊರ ಹೊಮ್ಮಬೇಕಾದರೆ ಪೋಷಕರು ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಮಕ್ಕಳು ಬರೀ ಶಾಲೆಯಲ್ಲಿ ಕಲಿತರೇ ಸಾಲದು. ಮನೆಯಲ್ಲಿ ಕೂಡ ಕಲಿಯಬೇಕಾದ್ದದ್ದು ಬಹಳಷ್ಟಿದೆ. ಅದಕ್ಕಾಗಿ ಪೋಷಕರು ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಂ ರೆಡ್ಡಿ ಮಾತನಾಡಿ, ‘ಪೋಷಕರ ಒಡನಾಟದಲ್ಲಿ ಬೆಳೆಯುವ ಮಕ್ಕಳು ಅವರ ಆಲೋಚನೆ, ಚಿಂತನೆಗಳನ್ನು ಅನುಸರಿಸುತ್ತಾರೆ. ಉತ್ತಮ ಸಂಸ್ಕಾರವುಳ್ಳ ಪರಿಸರದಲ್ಲಿ ಬೆಳೆಯುವ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮಗುವಿಗೆ ಶಿಕ್ಷಕರು ಶಾಲೆಯಲ್ಲಿಯೇ ಎಲ್ಲವನ್ನು ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ಕೂಡ ತಮ್ಮ ಜವಾಬ್ದಾರಿ ಅರಿತು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದರು.

‘ವಿದ್ಯಾರ್ಥಿ ಜೀವನ ಎಂಬುದು ನಾಲ್ಕು ಚಕ್ರದ ವಾಹನವಿದ್ದಂತೆ. ಎಲ್ಲ ಚಕ್ರಗಳು ಸುಸ್ಥಿತಿಯಲ್ಲಿದ್ದಾಗ ಮಾತ್ರ ವಾಹನ ಸುಲಭವಾಗಿ ಚಲಿಸಿ ಗುರಿ ಮುಟ್ಟಲು ಸಾಧ್ಯ. ಅದರಂತೆ ಪೋಷಕರು, ಸಮಾಜ, ಶಿಕ್ಷಕರು ಮತ್ತು ಶಾಲೆಯ ಆಡಳಿತ ಮಂಡಳಿ ಎಂಬ ಚಕ್ರಗಳು ಉತ್ತಮ ರೀತಿಯಲ್ಲಿದ್ದರೆ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. 2018–19ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿ ಚಾವ್ಲಾ ರೆಡ್ಡಿಗೆ ₹20 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಉಳಿದ ಎಂಟು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಏರ್‌ವೈಸ್‌ ಮಾರ್ಷಲ್‌ ಮ್ಯಾಥ್ಯೂ ಜಾರ್ಜ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಬಿಜಿಎಸ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ರಂಜಿತ್‌ ಕುಮಾರ್ ಮಂಡಲ್, ಮುಖ್ಯ ಶಿಕ್ಷಕ ಎ.ಎನ್.ಗಿರಿಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT