ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 'ನದಿ ಮೂಲದಿಂದ ನೀರಿನ ವ್ಯವಸ್ಥೆ ಕಲ್ಪಿಸಿ'

ಪ್ರಧಾನಿಗೆ ಮೋದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮನವಿ
Last Updated 25 ಮಾರ್ಚ್ 2023, 6:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಉದ್ಘಾಟಿಸುತ್ತಿರುವುದು ಸಂತೋಷದ ವಿಚಾರ. ಪ್ರಧಾನಿ ಅವರು ಈ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೂ ಗಮನ ನೀಡಬೇಕು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳಚೆ ನೀರನ್ನು ಹರಿಸುತ್ತಿರುವುದರಿಂದ ಕೆರೆಗಳು ಗೋಳಾಡುತ್ತಿವೆ. ಮೂರು ಜಿಲ್ಲೆಯ ನೀರಿನ ಸಮಸ್ಯೆಯನ್ನು ಪ್ರಧಾನಿ ಅವರು ಗಂಭೀರವಾಗಿ ಗಮನಿಸಬೇಕು. ಈ ಭಾಗದ ಕುಡಿಯುವ ನೀರಿನ ಮೂಲಗಳು ಹಾಳಾಗುತ್ತಿವೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿನಲ್ಲಿ ಯೂರೇನಿಯಂ ಮತ್ತು ನೈಟ್ರೇಟ್ ಅಂಶ ಅಪಾಯಕಾರಿ ಮಟ್ಟದಲ್ಲಿ ಇದೆ ಎಂದು ವರದಿಗಳು ಹೇಳುತ್ತಿವೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ. ಆದರೆ ಈ ಬಗ್ಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಯಾರೂ ಧ್ವನಿ ಎತ್ತಿಲ್ಲ. ಜನಪ್ರತಿನಿಧಿಗಳು ಜನರ ಮುಖ್ಯ ವಿಷಯ ಮರೆಮಾಚಿ ಬೇರೆ ಕಡೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು.‌ ಮಹಿಳೆಯರು, ಮಕ್ಕಳು, ವೃದ್ಧರು ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಇದನ್ನು ಸರ್ಕಾರ ಮುಚ್ಚಿಡುತ್ತಿದೆ. ಈ ಜಿಲ್ಲೆಗಳು ಅಪಾಯಕ್ಕೆ ಸಿಲುಕಿವೆ. ಇದು ಅಳಿವು ಉಳಿವಿನ ವಿಷಯ ಎಂದರು.

ಗೌರಿಬಿದನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ್, ಲಕ್ಷ್ಮಯ್ಯ ಮತ್ತಿತರರು ಗೋಷ್ಠಿಯಲ್ಲಿ ಇದ್ದರು.

ತಿರುಪತಿ ಲಾಡು ಅಭಿವೃದ್ಧಿ ಸಂಕೇತವಲ್ಲ: ಶ್ರೀನಿವಾಸ ಕಲ್ಯಾಣೋತ್ಸವ ಮಾಡಿ ತಿರುಪತಿ ಲಾಡು ನೀಡುತ್ತೇವೆ, ಕುಕ್ಕರ್, ಸೀರೆ ಹಂಚುತ್ತೇವೆ, ಉತ್ಸವಗಳನ್ನು ಮಾಡುತ್ತೇವೆ ಎನ್ನುವುದು ಅಭಿವೃದ್ಧಿಯ ಸಂಕೇತವಲ್ಲ ಎಂದು ಆರ್.ಆಂಜನೇಯರೆಡ್ಡಿ ಹೇಳಿದರು.

ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ಬಂದವರು ನಂತರ ವಿಧಾನಸೌಧಕ್ಕೆ ಹೋದ ಮೇಲೆ ಗುತ್ತಿಗೆದಾರರ ಲಾಬಿಯ ಪರವಾಗಿ ಇದ್ದಾರೆ. ಸಾವಿರಾರು ಕೋಟಿ ಹಣ ನೀರಿನ ಹೆಸರಿನಲ್ಲಿ ಲೂಟಿ ಆಗುತ್ತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT