ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಿಟ್ಟು ಹೊರ ಹೋಗದ ಸಚಿವರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

Last Updated 25 ನವೆಂಬರ್ 2021, 2:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಹಳಷ್ಟು ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಆದರೆ, ಯಾವ ಸಚಿವರು ರೈತರ ಕಷ್ಟ ಕೇಳುತ್ತಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತಿಲ್ಲ’ ಎಂದು ವಿಧಾನಸಭೆ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ತಾಲ್ಲೂಕಿನ ನುಗುತಹಳ್ಳಿಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ರೈತರ ಜಮೀನುಗಳನ್ನು ಬುಧವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಟೀಕಿಸಿದ ಮೇಲೆ ಮುಖ್ಯಮಂತ್ರಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ’ ಎಂದರು.

‘ನ. 1ರಿಂದಲೂ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ಈಗಾಗಲೇ ನಷ್ಟದ ಸಮೀಕ್ಷೆ ಮಾಡಿಸಬೇಕಿತ್ತು.ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯ ಮಾರ್ಗಸೂಚಿ ಅನ್ವಯ ಬೆಳೆ ನಷ್ಟ ಪರಿಹಾರ ಕಡಿಮೆ ದೊರೆಯುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಳೆಯಿಂದ ರಾಯಚೂರು ಭಾಗದಲ್ಲಿ ಭತ್ತಕ್ಕೆ ಹಾನಿ ಆಯಿತು. ಹೆಕ್ಟೇರ್‌ಗೆ ₹ 25 ಸಾವಿರ ನೀಡಿದೆ. ಸರ್ಕಾರ ರೈತರ ಪರ ಎಂದು ಹೇಳಿಕೊಂಡರೆ ಸಾಲದು. ಅವರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘ಬೆಳೆ ಹಾನಿ, ನಷ್ಟ ಪರಿಹಾರದ ವಿಚಾರವಾಗಿ ಸರ್ಕಾರಕ್ಕೆ ಖಾರವಾಗಿ ಪತ್ರ ಬರೆಯುವೆ. ಅದಕ್ಕೆ ಸ್ಪಂದಿಸದಿದ್ದರೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಪ್ರತಿಭಟನೆಯ ಹಾದಿ ತುಳಿಯುತ್ತೇವೆ’ ಎಂದು ಹೇಳಿದರು.

ಸಾಲವನ್ನು ಮರುಪಾವತಿಸುವಂತೆ ದೇನಾ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ನೋಟಿಸ್ ಕೊಡುತ್ತಿದ್ದಾರಂತೆ. ರೈತರಿಗೆ ಕಿರುಕುಳ ನೀಡಬೇಡಿ ಎಂದು ಸರ್ಕಾರ ಬ್ಯಾಂಕ್‌ಗೆ ಸೂಚಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT