ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಇ–ಖಾತೆಯಲ್ಲೊಂದು; ವಾಸ್ತವದಲ್ಲೊಂದು ಅಳತೆ

Published 23 ಮಾರ್ಚ್ 2024, 6:17 IST
Last Updated 23 ಮಾರ್ಚ್ 2024, 6:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅದು ನಗರದ ಪ್ರತಿಷ್ಠಿತ ಬಡಾವಣೆ. ವ್ಯಕ್ತಿಯೊಬ್ಬರು ಆ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ಹೊಸ ಮನೆಯನ್ನೇ ಖರೀದಿಸಿದರು. ಅದಾಗಲೇ ಆ ಮನೆಗೆ ಇ–ಖಾತೆಯೂ ಇತ್ತು. ನಂತರದ ದಿನಗಳಲ್ಲಿ ಮನೆ ಖರೀದಿಸಿದ ವ್ಯಕ್ತಿ ತಮ್ಮ ಹೆಸರಿಗೆ ಮನೆ ಖಾತೆ ಬದಲಾವಣೆ ಮಾಡಿಕೊಂಡರು. ಅವರು ಈಗ ಆ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ಈಗ ನಗರಸಭೆ ಸಿಬ್ಬಂದಿ ಪ್ರಕಾರ ಇ–ಖಾತೆಯಲ್ಲಿರುವ ಅಳತೆಗೂ ಮತ್ತು ವಾಸ್ತವದಲ್ಲಿರುವ ಅಳತೆಗೂ ವ್ಯತ್ಯಾಸವಿದೆ. ಸ್ಥಳಕ್ಕೆ ಬಂದು ಅಳೆದು 100 ಅಡಿ ಹೆಚ್ಚು ನಿರ್ಮಾಣವಾಗಿದೆ. ಬಾಕಿ ತೆರಿಗೆ ಕಟ್ಟಿ ಎಂದಿದ್ದಾರೆ. ತುರ್ತು ಇರುವ ಕಾರಣ ಮನೆ ಮಾಲೀಕರು ತೆರಿಗೆ ಕಟ್ಟಿದ್ದಾರೆ!

ಈ ಪ್ರಕರಣ ಉದಾಹರಣೆಯಷ್ಟೇ. ಹೀಗೆ ನಗರಸಭೆಯು ಈ ಹಿಂದಿನಿಂದ ನೀಡಿರುವ ಇ–ಖಾತೆಗಳಲ್ಲಿ ಇರುವ ಅಳತೆ ಮತ್ತು ವಾಸ್ತವದಲ್ಲಿ ಕಟ್ಟಡಗಳ ಅಳತೆಯಲ್ಲಿ ವ್ಯತ್ಯಾಸಗಳಾಗಿವೆ. ಮಾಲೀಕರು ಆಸ್ತಿ ತೆರಿಗೆ ಸ್ವಯಂ ಘೋಷಣೆಯ ತರುವಾಯವೂ ‘ಇ–ಖಾತೆ’ಯಂತಹ ಪ್ರಮುಖ ದಾಖಲೆಗಳನ್ನು ನೀಡುವಾಗ ನಗರಸಭೆ ಸಿಬ್ಬಂದಿ ಆ ಕಟ್ಟಡದ ಅಳತೆ ಪರಿಶೀಲಿಸಿಯೇ ‘ಇ–ಖಾತೆ’ಗೆ ಕ್ರಮವಹಿಸುತ್ತಾರೆ. 

ಆದರೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನೀಡಿರುವ ಇ–ಖಾತೆಗಳಲ್ಲಿ ಅಳತೆ ವ್ಯತ್ಯಾಸಗಳಾಗಿವೆ. ಅವುಗಳನ್ನು ಈಗ ಸರಿಪಡಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಅಳತೆ ವ್ಯತ್ಯಾಸದಿಂದ ನಗರಸಭೆಗೆ ಬರಬೇಕಾದ ತೆರಿಗೆ ಆದಾಯ ಖೋತಾ ಆಗುತ್ತಿದೆ. 

ಮತ್ತೊಂದು ಕಡೆ ಸಿಬ್ಬಂದಿಯೇ ಈ ಆದಾಯ ಖೋತಾಕ್ಕೆ ಕಾರಣವಾಗಿದ್ದಾರೆ. ಹೀಗೆ ಸಿಬ್ಬಂದಿಯೇ ಅಳತೆ ವ್ಯತ್ಯಾಸಕ್ಕೆ ಮೂಲ ಕಾರಣವಾಗಿರುವುದು ಅಕ್ರಮಗಳ ವಾಸನೆಗೂ ಕಾರಣವಾಗಿದೆ. ಈ ಹಿಂದಿನಿಂದಲೂ ಅಳತೆಯಲ್ಲಿ ವ್ಯತ್ಯಾಸಗಳನ್ನು ಮಾಡಿರುವುದು ಕಂಡು ಬರುತ್ತದೆ.

ಕಣ್ಣೊರೆಸುವ ತಂತ್ರ: ಕಳೆದ ಜನವರಿಯಲ್ಲಿ ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮನ ಗುಡಿ ರಸ್ತೆಯ ಮಳಿಗೆಗಳ ಮಾಲೀಕರಿಗೆ ನಗರಸಭೆಯು ನೋಟಿಸ್ ನೀಡಿದೆ.  ಹೈಕೋರ್ಟ್‌ನ ಆದೇಶದ ರೀತಿ ಬಜಾರ್ ರಸ್ತೆಯಲ್ಲಿರುವ ನಿಮ್ಮ ಸ್ವತ್ತಿನ ಮೂಲ ದಾಖಲೆಗಳನ್ನು ಮತ್ತು ಕಟ್ಟಡ ಪರವಾನಿ ಪಡೆದಿರುವ ದಾಖಲೆಗಳನ್ನು ತಿಳಿವಳಿಕೆ ಪತ್ರ ತಲುಪಿದ 30 ದಿನಗಳ ಒಳಗಾಗಿ ಈ ಕಚೇರಿಗೆ ಹಾಜರುಪಡಿಸಲು ತಿಳಿಯಪಡಿಸಲಾಗಿದೆ. ತಪ್ಪಿದಲ್ಲಿ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳಂತೆ ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಅಂಗಡಿಗಳ ಮಾಲೀಕರಿಗೆ ಅವರ ಆಸ್ತಿ ಸಂಖ್ಯೆ ಮತ್ತು ಅವರ ಮಳಿಗೆಗಳ ಆಳತೆಯನ್ನು ನಮೂದಿಸಿ ನೋಟಿಸ್ ನೀಡಲಾಗಿದೆ. ನಗರಸಭೆಯಲ್ಲಿರುವ ದಾಖಲೆಗಳ ಪ್ರಕಾರ ಸ್ವತ್ತಿನ ಅಳತೆ ನಮೂದಿಸಲಾಗಿದೆ.

ಹೀಗೆ ತನ್ನ ಬಳಿ ಈ ರಸ್ತೆಗಳ ಅಂಗಡಿಗಳ ದಾಖಲೆಗಳು ಇದ್ದರೂ ‘ಒತ್ತುವರಿ’ ಆಗಿರುವ ಅಂಗಡಿಗಳ ಬಗ್ಗೆ ನಗರಸಭೆಯು ಕ್ರಮವಹಿಸುತ್ತಿಲ್ಲ.

‘ಕೆಲವರು ತಮ್ಮ ಮೂಲ ದಾಖಲೆಗಳಲ್ಲಿ ಇರುವ ಅಳತೆ ಮೀರಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಇವುಗಳಿಗೆ ನಗರಸಭೆಯು ಇ–ಖಾತೆ ಸಹ ನೀಡಿದೆ ಎನ್ನುವ ಅನುಮಾನಗಳಿವೆ. ನಗರಸಭೆಯಲ್ಲಿ ದಾಖಲೆಗಳಿದ್ದರೂ ಒತ್ತುವರಿ ಮಾಡಿ ನಿರ್ಮಿಸಿರುವ ಮಳಿಗೆಗಳಿಗೆ ಇ–ಖಾತೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಿಖೆ ಆಗಬೇಕು. ನಗರಸಭೆಯಲ್ಲಿಯೇ ದಾಖಲೆಗಳು ಇವೆ. ಅವರು ತಕ್ಷಣವೇ ಕ್ರಮವಹಿಸಬಹುದು’ ಎಂದು ವ್ಯಾಪಾರಿಯೊಬ್ಬರು ತಿಳಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT