ಚಿಂತಾಮಣಿ: ಹೊರವಲಯದ ಕನಂಪಲ್ಲಿಯ ಯುವಕ ಎಸ್.ಮೋಹನ್ ಆಸ್ಟ್ರೇಲಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ್ದಾರೆ.
ಸಿಡ್ನಿಯಲ್ಲಿ ಮಾರ್ಚ್ 10ರಿಂದ 13 ವರೆಗೆ ನಡೆದ ಆಸ್ಟ್ರೇಲಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್‌ನಲ್ಲಿ ಉದ್ದ ಜಿಗಿತ ಮತ್ತು ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಮೂಡಿಗೇರಿಸಿಕೊಂಡಿದ್ದಾರೆ.
ಚಿಂತಾಮಣಿಯ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್ಸಿ ಪದವಿ, ಬೆಂಗಳೂರಿನ ಸೇಂಟ್ ಜಾರ್ಜ್ ಕಾಲೇಜಿನಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಮೋಹನ್ ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಶೋಧನಾ ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕನಂಪಲ್ಲಿ ನಿವಾಸಿ ನಿವೃತ್ತ ಎಎಸ್‌ಐ ಶಂಕರರೆಡ್ಡಿ ಮತ್ತು ಉಮಾದೇವಿ ದಂಪತಿ ಪುತ್ರ ಮೋಹನ್ ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದರು. ವಿದ್ಯಾರ್ಥಿದೆಸೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ಮತ್ತು ರಾಜ್ಯಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಶಾಲಾ ದಿನಗಳ ಬಳಿಕ ಕ್ರೀಡಾ ಚಟುವಟಿಕೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಬಾಲ್ಯದ ಕ್ರೀಡಾ ದಿನಗಳನ್ನು ನೆನದು 15 ವರ್ಷದ ಬಳಿಕ ಮತ್ತೆ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಅಭ್ಯಾಸ ಆರಂಭಿಸಿದರು.
ಕಳೆದ ವರ್ಷ ಉಡುಪಿಯಲ್ಲಿ ನಡೆದ 30 ವರ್ಷ ಮೇಲ್ಪಟ್ಟವರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದರು. ಬೆಂಗಳೂರಿನ ವಿದ್ಯಾನಗರದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ತೋರಿ ಆಸ್ಟ್ರೇಲಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು.
ಜನವರಿಯಲ್ಲಿ ನೇಪಾಳದ ಪ್ರೋಕ್ರಾನ್‌ನಲ್ಲಿ ನಡೆದ ಎಸ್‌ಬಿಕೆಎಫ್ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.