ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಲೂರು ಜನರಿಗೆ ಚಿರತೆ ಭಯ

ಕಳೆದ ಏಳು ತಿಂಗಳಲ್ಲಿ ಎಂಟು ಜಾನುವಾರುಗಳ ಬಲಿ, ದಾಳಿಯ ಭೀತಿಗೆ ಭಯದಲ್ಲಿ ಬದುಕುತ್ತಿರುವ ಜನರು
Last Updated 24 ಆಗಸ್ಟ್ 2020, 16:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮೊಟ್ಲೂರು ಗ್ರಾಮಸ್ಥರು ಚಿರತೆಗಳ ದಾಳಿಗೆ ಭಯಗೊಂಡಿದ್ದು, ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ.

ಗ್ರಾಮದ ಸಮೀಪದ ಅರಣ್ಯದಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ಪದೇ ಪದೇ ಮೊಟ್ಲೂರಿನ ಜಾನುವಾರುಗಳು, ಮೇಕೆ, ಕುರಿಗಳ ಮೇಲೆ ದಾಳಿ ನಡೆಸುತ್ತಿರುವುದು ಜನರಲ್ಲಿ ಭೀತಿ ಮೂಡಿಸಿದೆ.

ಕೃಷಿಯನ್ನೇ ಬದುಕಾಗಿಸಿಕೊಂಡಿರುವ 40 ಮನೆಗಳನ್ನು ಹೊಂದಿರುವ ಕಾಡಂಚಿನ ಚಿಕ್ಕ ಹಳ್ಳಿಯಲ್ಲಿ ಕಳೆದ ಏಳು ತಿಂಗಳಲ್ಲಿ ಚಿರತೆ ಹಾವಳಿಗೆ ಎರಡು ಕರು, ಐದು ಹಸುಗಳು, ಒಂದು ಕುದುರೆ ಬಲಿಯಾಗಿವೆ. ಅನೇಕ ಜಾನುವಾರುಗಳು, ಕುರಿ, ಮೇಕೆಗಳು ಚಿರತೆ ದಾಳಿಗೆ ಗಾಯಗೊಂಡ ಉದಾಹರಣೆಗಳಿವೆ.

ಗ್ರಾಮದಿಂದ ಕೂಗಳತೆ ಅರಣ್ಯ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ಎರಡ್ಮೂರು ಚಿರತೆಗಳು ಕುರಿ, ಮೇಕೆ, ದನಕರು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗುವವರಿಗೆ ಕಾಣಿಸಿಕೊಳ್ಳುವುದು ಮಾತ್ರವಲ್ಲ, ದಾಳಿಗೆ ಮುಂದಾಗುತ್ತಿವೆ. ಇದರಿಂದಾಗಿ ಯಾವ ಹೊತ್ತಿನಲ್ಲಿ ಏನು ಅನಾಹುತ ಕಾದಿದೆಯೋ ಎನ್ನುವ ಭಯದಲ್ಲಿ ಜನ ದಿನದೂಡುತ್ತಿದ್ದಾರೆ.

ಚಿರತೆ ದಾಳಿಯ ಭಯದಿಂದಾಗಿ ಗ್ರಾಮಸ್ಥರು ಜಮೀನು, ತೋಟಗಳಿಗೆ ತೆರಳಲು ಹಿಂದೇಟು ಹಾಕುವುದು ಮಾತ್ರವಲ್ಲ, ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಭಯಪಟ್ಟುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆಯವರು ಚಿರತೆಗಳನ್ನು ಇಲ್ಲಿಂದ ಸ್ಥಳಾಂತರಿಸುವ ಕೆಲಸ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

‘ಚಿರತೆಗಳ ದಾಳಿಯ ಭಯಕ್ಕೆ ಜನರ ಭಯದಲ್ಲಿ ಬದುಕುವಂತಾಗಿದೆ. ಅರಣ್ಯ ಇಲಾಖೆ ದೂರು ಕೊಟ್ಟರೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅರಣ್ಯ ಇಲಾಖೆಗೆ ದೂರು ನೀಡಲು ಹೋದರೆ ಅಧಿಕಾರಿಗಳು ವಿಡಿಯೊ ತನ್ನಿ, ನಾಳೆ ಬನ್ನಿ ಎಂದು ವಾಪಸ್‌ ಕಳುಹಿಸುತ್ತಿದ್ದಾರೆ’ ಎಂದು ಮೊಟ್ಲೂರು ನಿವಾಸಿ ವೆಂಕಟೇಶ್‌ ಹೇಳಿದರು.

ಈ ಕುರಿತು ವಲಯ ಅರಣ್ಯಾಧಿಕಾರಿ ವಿಕ್ರಂ ಅವರನ್ನು ವಿಚಾರಿಸಿದರೆ, ‘ಮೊಟ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಎರಡ್ಮೂರು ಚಿರತೆಗಳು ವಾಸಿಸುತ್ತಿವೆ. ಅರಣ್ಯ ಪ್ರದೇಶವೇ ಚಿರತೆಗಳ ಆವಾಸ ಸ್ಥಾನ. ಹೀಗಾಗಿ, ಅರಣ್ಯ ಪ್ರವೇಶಿಸದಂತೆ ಗ್ರಾಮಸ್ಥರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ದನ, ಕುರಿ, ಮೇಕೆಗಳನ್ನು ಮೇಯಿಸಲು ಅರಣ್ಯ ಪ್ರವೇಶಿಸಿದಾಗ ದಾಳಿ ನಡೆಯುತ್ತಿವೆ’ ಎಂದು ತಿಳಿಸಿದರು.

‘ಈಗಾಗಲೇ ಚಿರತೆ ದಾಳಿಯಿಂದ ಸತ್ತ ಒಂದು ಸೀಮೆ ಹಸು, ಕುದುರೆ ಮಾಲೀಕರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡಲಾಗಿದೆ. ಇತ್ತೀಚೆಗೆ ಕೂಡ ಅರಣ್ಯಕ್ಕೆ ಮೇಯಲು ಹೋಗಿದ್ದ ಮೇಕೆ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಜನರು ಅರಣ್ಯ ಪ್ರವೇಶಿಸಿ ಪ್ರಾಣಿಗಳಿಗೆ ತೊಂದರೆ ಮಾಡುವುದು ನಿಲ್ಲಿಸಬೇಕು’ ಎಂದರು.

‘ಸದ್ಯದ ಸ್ಥಿತಿಯಲ್ಲಿ ಗ್ರಾಮಸ್ಥರು ಮುಂಜಾಗ್ರತೆಯಿಂದ ಇರುವುದು ಒಳಿತು. ರಾತ್ರಿ ವೇಳೆ ಒಬ್ಬರೇ ಮನೆಯಿಂದ ಹೊರಗಡೆ ಓಡಾಡಬಾರದು. ಹಸು, ದನಕರು, ಮೇಕೆ, ಕುರಿಗಳನ್ನು ಮನೆಯಿಂದ ಹೊರಗಡೆ ಕಟ್ಟಬಾರದು. ಅರಣ್ಯ ಪ್ರದೇಶ ಪ್ರವೇಶಿಸುವುದು ನಿಲ್ಲಿಸಿದರೆ ಖಂಡಿತ ಚಿರತೆ ದಾಳಿ ಪ್ರಕರಣಗಳು ನಿಲ್ಲಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT