ಬುಧವಾರ, ಮಾರ್ಚ್ 22, 2023
32 °C
ಬಡ ಮಕ್ಕಳಿಗೂ ಉಚಿತ ಸಂಗೀತ ಪಾಠ

ಸಂಗೀತ ವಿದ್ವಾಂಸ ಶ್ರೀನಿವಾಸರೆಡ್ಡಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಸಾವಿರಾರು ಜನರಿಗೆ ಉಚಿತವಾಗಿ ಸಂಗೀತ ಕಲಿಸಿಕೊಟ್ಟು ಸಂಗೀತದ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಸಂಗೀತ ವಿದ್ವಾನ್ ಎಲ್.ವೈ. ಶ್ರೀನಿವಾಸರೆಡ್ಡಿ (94) ಬುಧವಾರ ರಾತ್ರಿ ರಾಜೀವ ನಗರದ ಮನೆಯಲ್ಲಿ ನಿಧನರಾದರು.

ಪಾರ್ಥಿವ ಶರೀರವನ್ನು ಗುರುವಾರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಶಿಷ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಸಂಜೆ ನಗರದ ಕನಂಪಲ್ಲಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಸಂಗೀತದ ಗಂಧ ಗಾಳಿಯೇ ಗೊತ್ತಿಲ್ಲದ ಬರಡು ನಾಡಿನಲ್ಲಿ ಸಾವಿರಾರು ಜನರಿಗೆ ಉಚಿತವಾಗಿ ಸಂಗೀತ ಕಲಿಸುತ್ತಿದ್ದರು. ಆರಂಭದ ದಿನಗಳಲ್ಲಿ ಮನೆ ಮನೆಗೂ ತೆರಳಿ ಮಕ್ಕಳ ಪೋಷಕರನ್ನು ಕಾಡಿ, ಬೇಡಿ ಮಕ್ಕಳನ್ನು ಸಂಗೀತದ ತರಗತಿಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡುತ್ತಿದ್ದರು.  

ಬೆಂಗಳೂರಿನನಲ್ಲಿ ಜನಿಸಿದ ರೆಡ್ಡಿಯವರಿಗೆ ತಂದೆ ಯಂಗಪ್ಪರೆಡ್ಡಿ ಬಾಲ್ಯದ ಶಿಲ್ಪ ಮತ್ತು ಕೀರ್ತನ ಗುರು. ತಮ್ಮ ನಂತರವೂ ಸಂಗೀತ ಪಾಠಶಾಲೆ ಮುಂದುವರೆಯಲಿ ಎಂದು ಟ್ರಸ್ಟ್ ಮೂಲಕ ಸಂಗೀತ ಮಹಾವಿದ್ಯಾಲಯ ತೆರೆದಿದ್ದಾರೆ.  

1970ರಲ್ಲಿ ಕೈವಾರದ ಅಮರನಾರೇಯಣಸ್ವಾಮಿ ದೇವಾಲಯ ಮತ್ತು ಭೀಮಲಿಂಗೇಶ್ವರಸ್ವಾಮಿ ದೇವಾಲಯಗಳ ಗೋಪುರಗಳ ಜೀರ್ಣೋದ್ಧಾರಕ್ಕಾಗಿ ತಾಲ್ಲೂಕಿಗೆ ಹೆಜ್ಜೆ ಇಟ್ಟವರು ನಂತರ ಚಿಂತಾಮಣಿಯಲ್ಲಿ ನೆಲೆಸಿದ್ದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಕೈವಾರದಲ್ಲಿ ನಡೆದ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾದಸಂಗಮ ಎಂಬ ಸ್ವರಚಿತ ಗ್ರಂಥ ಬಿಡುಗಡೆ ಮಾಡಿದರು. ಕನ್ನಡ, ತೆಲುಗು, ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೀರ್ತನೆ ರಚಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು