ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಿಡುಮಾಮಿಡಿ ಶ್ರೀ ಅಸಮಾಧಾನ

‘ಸರ್ಕಾರದಿಂದ ಮಠ, ಮಠದ ಶಾಲೆಗೆ ನೆರವು ಸಿಗುತ್ತಿಲ್ಲ’
Published 20 ಜನವರಿ 2024, 20:42 IST
Last Updated 20 ಜನವರಿ 2024, 20:42 IST
ಅಕ್ಷರ ಗಾತ್ರ

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಸಮಾನತೆ, ಜಾತ್ಯತೀತ, ಸೈದ್ಧಾಂತಿಕ ನಿಲುವಿನ ಮತ್ತು ನಾಡಿನ ಪ್ರಮುಖ ಮಠಗಳಲ್ಲಿ ಒಂದಾದ ನಿಡುಮಾಮಡಿ ಮಠಕ್ಕೆ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಜಿ ಅಸಮಾಧಾನ ಹೊರಹಾಕಿದ್ದಾರೆ.

ತಾಲ್ಲೂಕಿನ ಗೂಳೂರು ಗ್ರಾಮದ ನಿಡುಮಾಮಿಡಿ ಮಠದ ಡಾ.ಶ್ರೀ ಜಚನಿ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಪ್ರಾರಂಭೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಲ ಮಠಗಳಿಗೆ ಸರ್ಕಾರದಿಂದ ಬಹಳಷ್ಟು ಸೌಲಭ್ಯ ಹಾಗೂ ಅನುದಾನ ಸಿಗುತ್ತಿದೆ. ಆದರೆ, ನಮ್ಮ ಮಠಕ್ಕೆ ಸರ್ಕಾರದಿಂದ ಯಾವುದೇ ನೆರವು ದೊರೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಿಡುಮಾಮಿಡಿ ಮಠ ಮೊದಲಿ ನಿಂದಲೂ ಸಮಾನತೆ, ಜಾತ್ಯತೀತ ಮತ್ತು ಸೈದ್ಧಾಂತಿಕ ನಿಲುವು ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ದಲಿತರ ಪರವಾಗಿ ಜನಪರ ಹೋರಾಟದ ಕೇಂದ್ರವಾಗಿದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಕಂದಾಚಾರ, ಮೌಢ್ಯ ನಿವಾರಣೆಗೆ ಮಠ ಶ್ರಮಿಸುತ್ತಿದೆ. ನಾವು ಮಾನವೀಯ ನೆಲೆಗಟ್ಟಿನಲ್ಲಿ ಧ್ವನಿ ಎತ್ತುವುದು ಕೆಲವರಿಗೆ ಅಪಥ್ಯ ಆಗಿದೆ’ ಎಂದರು.

‘ಮೌಢ್ಯಗಳನ್ನು ವಿರೋಧಿಸದೇ, ಯಥಾಸ್ಥಿತಿ ಕಾಯ್ದುಕೊಂಡರೆ ಒಳ್ಳೆಯದು ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಸ್ವಾಮೀಜಿ ವಿಷಾದದಿಂದ ನುಡಿದರು. 

‘ಗಡಿಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಠದ ವತಿಯಿಂದ ಬಾಗೇಪಲ್ಲಿ ತಾಲ್ಲೂಕಿನ 50 ಗ್ರಾಮ ಹಾಗೂ ಗುಡಿಬಂಡೆ ತಾಲ್ಲೂಕಿನ  10 ಗ್ರಾಮಗಳಲ್ಲಿ ಶಾಲೆ ತೆರೆಯಲಾಗಿತ್ತು. 12 ವರ್ಷ ಕಷ್ಟಪಟ್ಟು ಶಾಲೆ ನಡೆಸಿದೆವು. ಆದರೆ, ಸರ್ಕಾರದಿಂದ ಸಹಕಾರ, ಅನುದಾನ ಸಿಗದ ಕಾರಣ ಶಾಲೆಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ’ ಎಂದು ಬೇಸರದಿಂದ ಹೇಳಿದರು.

ಬಿಳ್ಳೂರು ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜ್, ಪೋತೇಪಲ್ಲಿ ಎ.ಆದಿಮೂರ್ತಿ, ಪ್ರಭುದೇವ್, ಸಂದೀಪ್, ಮುಖ್ಯಶಿಕ್ಷಕ ಕೆ.ನಾಗರಾಜ, ಮಂಜುಳಾ, ಮಮತಾ, ವೆಂಕಟೇಶ್ ನಾಯಕ್, ವೈ.ಎನ್ ಶಿವಕುಮಾರ್, ನರಸಿಂಹಮೂರ್ತಿ, ಅಂಬರೀಶ್, ವೆಂಕಟರಮಣಪ್ಪ, ನಂಜುಂಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT