ಸೋಮವಾರ, ಮೇ 23, 2022
30 °C
ಕೊರೆಯುವಿಕೆ, ಸ್ಫೋಟಕ ಬಳಕೆ ಕಾರ್ಯಾಗಾರದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಾಕೀತು

ಅಕ್ರಮ ಗಣಿಗಾರಿಕೆ ತಡೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಹಾಗೂ ಪರಿಸರದ ಮೇಲೆ ಹಾನಿ ಉಂಟಾಗದಂತೆ ಎಚ್ಚರವಹಿಸಿ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ, ಗಣಿ ಇಲಾಖೆ ಸಿಬ್ಬಂದಿ ಹಾಗೂ ಸಂಬಂಧಿತ ಅಧಿಕಾರಿ ಸಿಬ್ಬಂದಿಗೆ ಮಂಗಳವಾರ ಆಯೋಜಿಸಲಾಗಿದ್ದ, ಗಣಿಗಾರಿಕೆಯಲ್ಲಿ ಕೊರೆಯುವಿಕೆ ಮತ್ತು ಸ್ಫೋಟಕ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗಣಿಗಾರಿಕೆಯಲ್ಲಿ ಕೊರೆಯುವಿಕೆ ಮತ್ತು ಸ್ಫೋಟಕಗಳ ಬಳಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಹಾಗೂ ಅಕ್ರಮ ಗಣಿಗಾರಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರು ಈ ಕಾರ್ಯಾಗಾರದಲ್ಲಿ ಗಣಿಗಾರಿಕೆ ಹಾಗೂ ಅದರ ನಿಯಮಗಳ ಬಗ್ಗೆ ಅರಿತು ಕಾನೂನು ಕ್ರಮಗಳನ್ನು ಪಾಲನೆ ಮಾಡಬೇಕು ಎಂದರು.

ಪರಿಶೀಲನೆಗೆ ಸೂಚನೆ: ಗಣಿಗಾರಿಕೆ ನಡೆಸಲು ಹಾಗೂ ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಸುರಕ್ಷಿತ ವಿಧಾನಗಳು, ಗಣಿಗಾರಿಕೆಯಲ್ಲಿ ಕೊರೆಯುವ ವಿಧಾನಗಳು ಮತ್ತು ಸ್ಫೋಟಕ ಬಳಕೆ ವಿಧಾನಗಳು ಬಹಳ ಪ್ರಮುಖ ಪಾತ್ರವಹಿಸುತ್ತವೆ. ಸರ್ಕಾರದ ಜಾರಿಗೆ ಗಣಿಗಾರಿಕೆ ಕಾಯ್ದೆ ಅನ್ವಯ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಾಗೂ ವಿಧಿಸಲಾಗಿರುವ ಮಾನದಂಡಗಳು ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪನ್ಯಾಸ ನೀಡಿದ ಗಣಿಗಳ ಸುರಕ್ಷತೆಯ ನಿರ್ದೇಶನಾಲಯದ ವೇಣುಗೋಪಾಲ್, ಗಣಿಗಾರಿಕೆ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅರ್ಹರಿರುವವರಿಗೆ ಮಾತ್ರ ಗಣಿ ಮತ್ತು ಭೂ ವಿಜ್ಞಾನ ಸಂಸ್ಥೆಯಿಂದ ಪರವಾನಗಿ ಪತ್ರವನ್ನು ನೀಡಲಾಗುತ್ತದೆ. ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕನ ಸುರಕ್ಷತೆ ಗಣಿಗಾರಿಕೆ ಸಂಸ್ಥೆಯ ಮಾಲಿಕನ ಹೊಣೆಗಾರಿಕೆಯಾಗಿರುತ್ತದೆ. ಕಾರ್ಮಿಕರ ಆರೋಗ್ಯದ ಪರಿಸ್ಥಿತಿಯನ್ನು ಮಾಲೀಕನೇ ಭರಿಸಬೇಕಾಗಿರುತ್ತದೆ. ಯಾವುದೇ ಅನಿರೀಕ್ಷಿತ ಘಟನೆ ನಡೆದರೆ ಅದಕ್ಕೆ ಗಣಿಗಾರಿಕೆಯ ಮಾಲಿಕ, ಮೇಲ್ವಿಚಾರಕ, ಮ್ಯಾನೇಜರ್‌ಗಳು ಜವಾಬ್ದಾರರಾಗಿರುತ್ತಾರೆ. ಒಟ್ಟಾರೆಯಾಗಿ ಗಣಿಗಾರಿಕೆ ಮಾಡಬೇಕಾದರೆ ಯಾವ ರೀತಿ ಅರ್ಹತೆ ಪತ್ರಗಳು ಪಡೆಯಬೇಕು, ಯಾವ ರೀತಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕು, ಕೊರೆಯುವ ವೇಳೆ ಅನುಸರಿಸಬೇಕಾದ ಕ್ರಮ ಮತ್ತು ಸ್ಫೋಟಕ ವೇಳೆ ಬಳಕೆ ಮಾಡಬೇಕಾದ ವಿಧಾನಗಳ ಬಗ್ಗೆ ವಿವರಿಸಿದರು.

ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರು ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿದಾಗ ಪರಿಶೀಲಿಸ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಡಿವೈಎಸ್ಪಿ ರವಿಶಂಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ನಂಜುಂಡಸ್ವಾಮಿ, ಸೇರಿದಂತೆ ತಾಲ್ಲೂಕಿನ ಎಲ್ಲಾ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ನಿರ್ಲಕ್ಷಿಸಿದರೆ ಕಠಿಣ ಕ್ರಮ

ಜಿಲ್ಲೆಯಲ್ಲಿ ಇರುವಂತಹ ಪ್ರತಿಯೊಂದು ಗಣಿಗಾರಿಕೆಯ ಮೇಲೆ ಪೊಲೀಸರು ನಿಗಾವಹಿಸಿರಬೇಕು. ಗಣಿಗಾರಿಕೆ ನಡೆಸುವವರು ಪರವಾನಗಿ ಪಡೆದು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಹಾಗೂ ಅಂತಹ ಪ್ರದೇಶದಲ್ಲಿ ಕೈಗೊಳ್ಳಲಾದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ಪೊಲೀಸರು ಗಣಿಗಾರಿಕೆ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿಯನ್ನು ನೀಡಬೇಕು. ಒಂದು ವೇಳೆ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು. ಪೊಲೀಸ್‌ ಇಲಾಖೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯವಹಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು