ಶುಕ್ರವಾರ, ಜೂಲೈ 3, 2020
21 °C
ಶಿಸ್ತುಕ್ರಮದ ಬಗ್ಗೆ ಗುಟ್ಟು ಬಿಟ್ಟು ಕೊಡದ ಮೇಲಧಿಕಾರಿಗಳು

ಚಿಕ್ಕಬಳ್ಳಾಪುರ | ಟೈರ್ ಕಳ್ಳರ ವಿಚಾರದಲ್ಲಿ ಪೊಲೀಸರ ನಡೆ, ಸಂಶಯಕ್ಕೆ ಎಡೆ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಟೈರ್‌ ಕಳ್ಳರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಬಿಟ್ಟು ಕಳುಹಿಸಿದ ಗ್ರಾಮಾಂತರ ಠಾಣೆ ಪೊಲೀಸರ ಕರ್ತವ್ಯ ಲೋಪ ಪ್ರಕರಣದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಧೋರಣೆ ಇದೀಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ನಿಷ್ಪಕ್ಷಪಾತ ತನಿಖೆ ಮತ್ತು ದಕ್ಷತೆಯ ಮೂಲಕ ಕರ್ತವ್ಯದಲ್ಲಿ ವೃತ್ತಿಪರ ಮೌಲ್ಯಗಳನ್ನು ಎತ್ತಿ ಹಿಡಿದು ಅಪರಾಧಗಳನ್ನು ಮತ್ತು ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುತ್ತೇವೆ ಎಂಬ ಧ್ಯೇಯ ಹೊಂದಿರುವ ಪೊಲೀಸ್‌ ಇಲಾಖೆಯ ಒಳಗೆ ನಡೆದಿರುವ ಈ ವಿದ್ಯಮಾನ ಸದ್ಯ ಇಲಾಖೆಯ ವಲಯದಲ್ಲೇ ತೀವ್ರ ಚರ್ಚೆಗೆ ಎಡೆ ಮಾಡಿದೆ.

ತಾಲ್ಲೂಕಿನ ಮರಸನಹಳ್ಳಿ ನಿವಾಸಿ ಅಶೋಕ್‌ ಎಂಬುವರು ತಮ್ಮ ಲಾರಿಯ ಟೈರ್‌ಗಳು ಕಳ್ಳತನವಾಗಿರುವ ಬಗ್ಗೆ ಮಾರ್ಚ್‌ ತಿಂಗಳ ಎರಡನೇ ವಾರದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಲಾರಿಯನ್ನು ಜಪ್ತಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ಅಕ್ರಮವಾಗಿ ನಾಲ್ಕು ದಿನ ಠಾಣೆಯಲ್ಲಿ ಇರಿಸಿಕೊಂಡು, ಕೊನೆಗೆ ಅವರಿಂದ ಲಂಚ ಪಡೆದು ಬಿಡುಗಡೆಗೊಳಿಸಿ, ರಾಜೀ ಸಂಧಾನದ ಹೆಸರಿನಲ್ಲಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಪೊಲೀಸ್‌ ಮತ್ತು ಸಾರ್ವಜನಿಕ ವಲಯಗಳಲ್ಲಿ ಹರಿದಾಡುತ್ತಿದೆ.

ಈ ಆರೋಪವನ್ನು ಅಲ್ಲಗಳೆಯುವ ಗ್ರಾಮಾಂತರ ಠಾಣೆ ಎಸ್‌ಐ ಚೇತನಗೌಡ ಅವರು, ’ಮರಸನಹಳ್ಳಿ ನಿವಾಸಿ ಅಶೋಕ್‌ ಎಂಬುವರು ಟೈರ್‌ ಕಳ್ಳತನದ ಬಗ್ಗೆ ನೀಡಿದ ದೂರಿನ ಮೇಲೆ ಲಾರಿ ಚಾಲಕ ರಾಮಗಾನಪರ್ತಿ ನಿವಾಸಿ ಶ್ರೀನಿವಾಸ್‌ ಅವರನ್ನು ಬಂಧಿಸಿದ್ದೆವು. ಕದ್ದ ಟೈರ್‌ ಅಳವಡಿಸಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದೆವು. ದೂರುದಾರರು ಮತ್ತು ಆರೋಪಿ ರಾಜೀ ಸಂಧಾನ ಮಾಡಿಕೊಂಡ ಕಾರಣಕ್ಕೆ ಪ್ರಕರಣ ದಾಖಲಿಸಿಲ್ಲ‘ ಎನ್ನುತ್ತಾರೆ.

ಆದರೆ, ಸಂವಿಧಾನದ 22ನೇ ವಿಧಿಯ ಪ್ರಕಾರ ಪೊಲೀಸರು ಯಾವುದೇ ಬಂಧಿತ ವ್ಯಕ್ತಿಯನ್ನು ದೋಷಾರೋಪದೊಂದಿಗೆ 24 ಗಂಟೆಯ ಒಳಗೆ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಇದನ್ನು ಬಿಟ್ಟು ವಿಚಾರಣೆ ನೆಪದಲ್ಲಿ ಅಕ್ರಮವಾಗಿ ಠಾಣೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.

ಜತೆಗೆ, ಕೆಳಹಂತದ ಸಿಬ್ಬಂದಿ ಏನೇ ಅಪರಾಧ ಘಟನೆಗಳು ನಡೆದರೆ, ಆರೋಪಿಗಳನ್ನು ಬಂಧಿಸಿದರೆ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಆದರೆ, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್‌ ದಾಖಲಿಸದೆ, ಕಳ್ಳರನ್ನು ಸದ್ದಿಲ್ಲದೆ ಬಿಟ್ಟು ಕಳುಹಿಸಿದ್ದಾರೆ. 

ಇಷ್ಟೇ ಅಲ್ಲದೇ, ಕೃತ್ಯಕ್ಕೆ ಬಳಿಸಿದ ಲಾರಿಯನ್ನು ಪೊಲೀಸರು ಒಂದು ತಿಂಗಳಿಗೂ ಅಧಿಕ ಕಾಲ ತಮ್ಮ ಸುಪರ್ದಿಯಲ್ಲಿಕೊಟ್ಟುಕೊಂಡು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. 

ಇಷ್ಟೆಲ್ಲ ನಡೆದು ಒಂದೂವರೆ ತಿಂಗಳು ಕಳೆದರೂ ಈ ವಿಚಾರ ಮೇಲಾಧಿಕಾರಿಗಳಾದ ಸರ್ಕಲ್‌ ಇನ್‌ಸ್ಪೆಕ್ಟರ್‌, ಡಿವೈಎಸ್ಪಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಗಮನಕ್ಕೆ ಬಂದಿಲ್ಲ ಎನ್ನುವ ವಿಚಾರ ಇಲಾಖೆಯನ್ನು ಸಾರ್ವಜನಿಕರು ಸಂಶಯದಿಂದ ನೋಡುವಂತೆ ಮಾಡಿದೆ.

ಕಳ್ಳತನದ ಆರೋಪಿಯನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟಿದ್ದೇವೆ ಎಂಬ ಗ್ರಾಮಾಂತರ ಠಾಣೆ ಎಸ್‌ಐ ಹೇಳಿಕೆ ಮತ್ತು ಒಂದು ತಿಂಗಳ ಕಾಲ ನಗರ ಪೊಲೀಸ್‌ ಠಾಣೆ ಆವರಣದಲ್ಲಿಯೇ ನಿಂತಿದ್ದ ಕೃತ್ಯಕ್ಕೆ ಬಳಸಿದ ಲಾರಿಯ ಸಾಕ್ಷ್ಯ ಇಲಾಖೆಯ ಕೆಳಹಂತದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.

ಐಜಿಪಿಗೆ ದೂರು

ಈ ಪ್ರಕರಣದಲ್ಲಿ ಯಾರದೆಲ್ಲ ಕೈವಾಡವಿದೆ? ಯಾರೆಲ್ಲ ತಪ್ಪಿತಸ್ಥರು? ಹಿರಿಯ ಅಧಿಕಾರಿಗಳು ಏನು ಕ್ರಮ ಜರುಗಿಸಿದ್ದಾರೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದಿರುವುದು ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿದ್ದು, ಕೆಲ ಮುಖಂಡರು ಬುಧವಾರ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಶಿಸ್ತುಕ್ರಮ ತಿಳಿಯಲು ಆರ್‌ಟಿಐ ಹಾಕಿ!

ಈ ಕುರಿತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಪ್ರಶ್ನಿಸಿದರೆ, ’ಇದು ಇಲಾಖೆಯ ಆಂತರಿಕ ವಿಚಾರ. ನಾವು ಶಿಸ್ತುಕ್ರಮ ಕೈಗೊಂಡಿದ್ದೇವೆ. ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ‘ ಎಂದರು. ’ಯಾವ ರೀತಿಯ ಕ್ರಮ ಜರುಗಿಸಿದ್ದೀರಿ‘ ಎಂದು ವಿಚಾರಿಸಿದರೆ, ’ಒಂದು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅರ್ಜಿ ಹಾಕಿ‘ ಎಂದು ತಿಳಿಸಿದರು.

ಬಾಯಿ ಬಿಡದ ಅಧಿಕಾರಿಗಳು

ಗ್ರಾಮಾಂತರ ಠಾಣೆ ಸಿಬ್ಬಂದಿಯ ಗಂಭೀರ ಕರ್ತವ್ಯಲೋಪ ಬೆಳಕಿಗೆ ಬರುತ್ತಿದ್ದಂತೆ ಡಿವೈಎಸ್ಪಿ ರವಿಶಂಕರ್ ಅವರು ಪ್ರಕರಣದ ತನಿಖೆ ನಡೆಸಿ ಎಸ್ಪಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವಂತೆ ಮೇಲಾಧಿಕರಿಗಳ ಮಟ್ಟದಲ್ಲಿ ಪ್ರಭಾವಿ ಸಚಿವರೊಬ್ಬರ ಲಾಬಿ ನಡೆದಿರುವ ಕಾರಣಕ್ಕೆ ಪ್ರಕರಣದಲ್ಲಿ ತಪ್ಪಿತಸ್ಥ ಸಿಬ್ಬಂದಿ ಹೆಸರುಗಳ ಜತೆಗೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿದ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂಬ ಮಾತು ಇದೀಗ ಖಾಕಿ ವಲಯದಲ್ಲಿಯೇ ಕೇಳಿಬರುತ್ತಿದೆ.

ಕಳ್ಳತನ ಕುಮ್ಮಕ್ಕಿಗೆ ತಾಜಾ ಉದಾಹರಣೆ

ಕೆಲ ಪೊಲೀಸರ ಕುಮ್ಮಕ್ಕಿನಿಂದಲೇ ಕಳ್ಳರು ಕಳ್ಳತನ ಮಾಡುತ್ತಾರೆ ಎಂಬ ಮಾತಿದೆ. ಅದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆಯಂತಿದೆ. ಕಳ್ಳತನದ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಎಷ್ಟೆಲ್ಲ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬಾಯಿ ಬಿಡಿಸುವ ಬದಲು ಪೊಲೀಸರೇ ಬಾಯಿ ಮುಚ್ಚಿಕೊಂಡು ಸಂಧಾನ ನಡೆಸಿ ಆರೋಪಿಗಳನ್ನು ಬಿಟ್ಟು ಕಳುಹಿಸಿರುವುದು ಎಷ್ಟು ಸರಿ? ಆರೋಪಿಗಳನ್ನು ಕೂಡಲೇ ಬಂಧಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ವಕೀಲ ಆರ್.ಮಟಮಪ್ಪ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು