ಶನಿವಾರ, ಅಕ್ಟೋಬರ್ 24, 2020
26 °C
ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಬೆಸ್ಕಾಂ ಇಲಾಖೆಯ ನೌಕರರು, ಅಧಿಕಾರಿಗಳು, ಎಂಜಿನಿಯರ್‌ಗಳು ಬೆಸ್ಕಾಂ ಕಚೇರಿಯ ಎದುರು ಸೋಮವಾರ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಖಾಸಗೀಕರಣ ಪ್ರಸ್ತಾವದ ವಿರುದ್ಧ ಘೋಷಣೆ ಕೂಗಿದ ಸಿಬ್ಬಂದಿ, ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಜಾರಿ ಮಾಡಿದರೆ ಸಿಬ್ಬಂದಿಗೆ ಮಾತ್ರವಲ್ಲ ಗ್ರಾಹಕರಿಗೂ ತೊಂದರೆಯಾಗಲಿದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ ಹೋರಾಟ ತೀವ್ರಗೊಳಿಸಲಿದ್ದಾರೆ ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಕೆ.ಶ್ರೀನಿವಾಸ್, ‘ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯೂ ಕಾರ್ಮಿಕ ವಿರೋಧಿಯಾಗಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈ ಬಿಡಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು 2020ರ ಕಾಯ್ದೆ ತಂದಿರುವುದನ್ನು ಸಂಘವು ವಿರೋಧಿಸಲಿದೆ. ಈ ಕಾಯ್ದೆ ಜಾರಿಯಾದರೆ ವಿದ್ಯುತ್ ವಿತರಣಾ ಕಂಪನಿಯ ನೌಕರರಿಗೆ ತೊಂದರೆಯಾಗಲಿದೆ’ ಎಂದು ಹೇಳಿದರು.

‘ವಿದ್ಯುತ್ ಕಂಪನಿಗಳ ಮೇಲೆ ಖಾಸಗೀಕರಣದಿಂದ ವಿದೇಶಿ ಹೂಡಿಕೆಗಳು ಹೆಚ್ಚಾಗುವ ಆತಂಕವಿದ್ದು, ಇದರಿಂದ ಶ್ರಮಿಕ ವರ್ಗದ ಮೇಲೆ ಗಂಭೀರ ಪರಿಣಾಮವಾಗಲಿದೆ. ದೇಶೀಯ ಸಂಸ್ಥೆಗಳ ಜನಮಾನಸದಿಂದ ದೂರ ಸರಿಯುವ ಸಾಧ್ಯತೆಗಳಿವೆ. ಇಂತಹ ಅನೇಕ ಕಾರಣಗಳಿಂದ ಕೇಂದ್ರ ಸರಕಾರ ಜನ, ನೌಕರರ ವಿರೋಧಿಗಳ ನಡುವೆ ಖಾಸಗೀಕರಣ ನೀತಿಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಿದರೆ ಅನೇಕ ನೌಕರರು ಕೆಲಸ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ. ಸಾರ್ವಜನಿಕರು ಸಹ ಖಾಸಗೀಕರಣ ನೀತಿಯಿಂದ ಅನೇಕ ರೀತಿಯ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಇಬಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ನಾಗರಾಜ್, ಬೆಸ್ಕಾಂ ಲೆಕ್ಕಾಧಿಕಾರಿಗಳ ಸಂಘ ಪದಾಧಿಕಾರಿ ಜಿ.ನಾರಾಯಣಸ್ವಾಮಿ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯ ವಿ.ಶ್ರೀನಿವಾಸ್, ಬೆಸ್ಕಾಂ ಎಂಜಿನಿಯರ್ ಸಂಘದ ಪದಾಧಿಕಾರಿ ವಾಸುದೇವ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.