ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಕಾರರ ತತ್ವಾದರ್ಶ ಇಂದಿಗೂ ಪ್ರಸ್ತುತ: ತಾ.ಪಂ. ಅಧ್ಯಕ್ಷ ಬಿ.ಎಂ.ರಾಮಸ್ವಾಮಿ

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ
Last Updated 14 ಜನವರಿ 2020, 13:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಭೋವಿ ಜನಾಂಗದವರೂ ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುವ ಜತೆಗೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಾಳಿದ ಸಿದ್ಧರಾಮೇಶ್ವರರು ವಚನ ಸಾಹಿತ್ಯದ ಮೂಲಕ ಇಡೀ ಸಮಾಜದ ಒಳಿತಿಗಾಗಿ ದುಡಿದರು. ವೈದಿಕ ಧರ್ಮದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮಾಜ ಸುಧಾರಣೆಯ ಕಾಯಕ ಮಾಡಿದರು. ಜತೆಗೆ ಕೆರೆ–ಕಟ್ಟೆಗಳು, ರಸ್ತೆ, ದೇವಾಲಯಗಳನ್ನು ನಿರ್ಮಿಸಿದರು. ಭೋವಿ ಜನಾಂಗದವರು ಹಿಂದಿನ ಕಾಲದಿಂದಲೂ ತುಂಬಾ ಶ್ರಮಜೀವಿಗಳು. ಸಮಾಜಕ್ಕೆ ಅವರು ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿ, ‘ಶಿವಯೋಗಿ ಸಿದ್ಧರಾಮೇಶ್ವರ ಅವರು ಸಮಸಮಾಜ ಕಟ್ಟಲು ಶ್ರಮಿಸಿ, ಕಾಯಕವೇ ಕೈಲಾಸ ಎಂಬ ಮಾರ್ಗದಲ್ಲಿ ಸಾಗಿದವರು. ಜಾತಿ ಪದ್ಧತಿ ಖಂಡಿಸಿ, ಮಹಿಳೆಯರಿಗೆ ದೇವರ ಸ್ಥಾನ ಕಲ್ಪಿಸಿ ಕೊಟ್ಟು, ಆದರ್ಶಗಳ ಮೂಲಕ ಸಮಾಜವನ್ನು ಉತ್ತಮ ದಾರಿಯಲ್ಲಿ ಕರೆದುಕೊಂಡು ಹೋಗಲು ಮುಂದಡಿ ಇಟ್ಟರು. ಯುವಜನರು ವಚನಗಳನ್ನು ಓದಿ ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.

ಚಿಂತಾಮಣಿ ಮಹಿಳಾ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಮಾತನಾಡಿ, ‘ನಮ್ಮ ಪೂರ್ವಿಕರು ದೇವಾಲಯ, ಗುಡಿ ಗೋಪುರ, ಕೆರೆ, ಕಾಲುವೆ, ಕಟ್ಟೆಗಳನ್ನು ಈಗಿನ ಜನರಿಗೆ ಹಾಗೂ ಮುಂದಿನ ಯುವ ಪೀಳಿಗೆಯವರಿಗೆ ಬಳುವಳಿಯಾಗಿ ನೀಡಿದ್ದಾರೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಸಾಧನೆ ಮಾಡಬೇಕು. ಇಲ್ಲವಾದರೆ ಬದುಕಿದ್ದು ಸತ್ತಂತೆ. ಸಿದ್ದರಾಮೇಶ್ವರರ ಆದರ್ಶಗಳನ್ನು ಪಾಲಿಸುವುದು ಎಂದರೆ ಒಳ್ಳೆಯ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರ್ಥ’ ಎಂದು ಹೇಳಿದರು.

‘ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾದ ಶಿವಯೋಗಿ ಸಿದ್ದರಾಮೇಶ್ವರರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದರು. ದಾರ್ಶನಿಕರ ವಚನಗಳು, ಸಂದೇಶಗಳು ಒಂದು ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ. ಅವುಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಡಿ.ಲೋಹಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ, ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಭೋವಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಗುರ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT