ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ |ಚಿಂತಾಮಣಿ: ಖಾಲಿ ನಿವೇಶನ; ಕಸದ ತಾಣ

ಚಿಂತಾಮಣಿ ನಗರದಲ್ಲಿ ಅಧ್ವಾನ; ಅಕ್ಕಪಕ್ಕದ ನಿವಾಸಿಗಳಿಗೆ ಗೋಳು
Published 13 ಮೇ 2024, 5:38 IST
Last Updated 13 ಮೇ 2024, 5:38 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ವಿವಿಧ ಬಡಾವಣೆಗಳಲ್ಲಿ ಖಾಲಿ ಇರುವ ನಿವೇಶನಗಳು ಕಸದ ತಾಣಗಳಾಗಿದೆ. ತರಕಾರಿ, ಬಾಕ್ಸ್, ಪ್ಲಾಸ್ಟಿಕ್ ಮತ್ತಿತರ ಕಸಗಳಿಂದ ತುಂಬಿರುವ ನಿವೇಶನಗಳು ಕಸದ ತಿಪ್ಪೆಗಳಾಗಿವೆ.

ಕೆಲವು ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಸೊಳ್ಳೆ, ಇಲಿ, ಹಾವುಗಳ ಆವಾಸಸ್ಥಾನಗಳಾಗಿವೆ. ಜತೆಗೆ ಬಹಳಷ್ಟು ನಿವೇಶನಗಳು ತ್ಯಾಜ್ಯ, ಪ್ಲಾಸ್ಟಿಕ್ ಬಯಲು ಮೂತ್ರಾಲಯಗಳಾಗಿವೆ. ಇದರಿಂದ ಸುತ್ತಮುತ್ತಲಿನ ಮನೆಗಳ ನಾಗರಿಕರ ಬದುಕು ದುಸ್ತರವಾಗಿದೆ.

ನಗರದಲ್ಲಿ 35 ವಾರ್ಡ್‌ಗಳಿವೆ. ಹಲವು ಬಡಾವಣೆಗಳಿವೆ. ಹೊಸದಾಗಿ ಸೇರ್ಪಡೆ ಆಗಿರುವ ಬಡಾವಣೆಗಳಲ್ಲಿ ನಿವೇಶನಗಳು ಖಾಲಿ ಇವೆ. ಬಡಾವಣೆಗಳು ನಿರ್ಮಾಣವಾದಾಗ ನಿವೇಶನ ಖರೀದಿಸಿದ ಅನೇಕರು ಇನ್ನೂ ಕಟ್ಟಡಗಳನ್ನು ನಿರ್ಮಿಸಿಲ್ಲ. ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಗರಸಭೆ ಸೂಚನೆ ನೀಡಿದ್ದರೂ ಯಾರು ಪಾಲಿಸುತ್ತಿಲ್ಲ.

ಬಹುತೇಕ ನಿವೇಶನಗಳ ಮಾಲೀಕರು ಹೊರ ಊರುಗಳಲ್ಲಿ ನೆಲೆಸಿರುತ್ತಾರೆ. ಯಾವಾಗಲೋ ಒಮ್ಮೆ ನಿವೇಶನ ಜಾಗಕ್ಕೆ ಬಂದು ಹೋಗುತ್ತಾರೆ. ನಿವೇಶನದ ಸ್ವಚ್ಛತೆಗೆ ಗಮನಹರಿಸುವುದಿಲ್ಲ.

ವಿವಿಧ ಬಡಾವಣೆಗಳ ಬಹುತೇಕ ಖಾಲಿ ನಿವೇಶಗಳು ಕಸದ ತಿಪ್ಪೆಗಳಾಗಿವೆ. ಕಸಕಡ್ಡಿ, ಚಪ್ಪಲಿ, ಪ್ಲಾಸ್ಟಿಕ್ ವಸ್ತುಗಳು, ಬಲ್ಬ್, ಗಾಜು, ಮದ್ಯ, ನೀರಿನ ಬಾಟಲುಗಳು, ಮೊಟ್ಟೆ ಮಾಂಸದ ತ್ಯಾಜ್ಯ, ಕೊಳೆತ ಹಣ್ಣು, ತರಕಾರಿ ಎಸೆಯುತ್ತಾರೆ. ಕೆಲವು ಕಡೆ ಹಳೆಯ ಕಟ್ಟಡ ಅವಶೇಷಗಳು ಸುರಿಯುತ್ತಾರೆ. ನಿವೇಶನಗಳ ನೆರೆಹೊರೆಯ ಮನೆಗಳವರಿಗೆ ಕಿರಿಕಿರಿ ಆಗುತ್ತದೆ. ಸೊಳ್ಳೆ, ಇಲಿ, ಹಾವುಗಳ ಕಾಟ ಹಾಗೂ ದುರ್ವಾಸನೆಯಿಂದ ಬದುಕು ಅಸಹನೆಯಿಂದ ಕೂಡಿರುತ್ತದೆ.

ಹಲವು ನಿವೇಶನಗಳಲ್ಲಿ ಗಿಡಗಂಟೆಗಳು ಆಳೆತ್ತರಕ್ಕೆ ಬೆಳೆದಿವೆ. ಹಂದಿ, ನಾಯಿಗಳು ನಿವೇಶನಗಳಲ್ಲಿನ ಕಸದ ಗುಡ್ಡೆಗಳನ್ನು ಎಳೆದಾಡುತ್ತವೆ. ಕೆಲವು ಕಡೆ ಹಂದಿ, ನಾಯಿಗಳು ಅರಚಾಡಿ ರಾತ್ರಿ ಸಮಯದಲ್ಲಿ ಜನರ ನಿದ್ದೆಗೆಡಿಸುತ್ತವೆ. ನಿವೇಶನಗಳ ಪೊದೆಗಳಲ್ಲಿ ಹಾವು, ಚೇಳು, ಸೊಳ್ಳೆ ಹುಳುಹುಪ್ಪಟೆಗಳು ಸೇರಿಕೊಳ್ಳುತ್ತವೆ. ಹೀಗಾಗಿ ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಆತಂಕದಲ್ಲಿ ಬದುಕುವ ಸ್ಥಿತಿ ಇದೆ.

ನಗರದ ಹೊರವಲಯದ ಕೆಲವು ಬಡಾವಣೆಗಳಲ್ಲಿನ ಖಾಲಿ ನಿವೇಶನಗಳು ಪುಂಡರು ಮೋಜಿಮಸ್ತಿ ನಡೆಸುವ ತಾಣಗಳಾಗಿವೆ. ಪುಂಡರ ಗುಂಪುಗಳು ಖಾಲಿ ನಿವೇಶನಗಳಲ್ಲಿ ಮದ್ಯಪಾನ ಮಾಡುತ್ತಾರೆ. ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲುತ್ತಿರುತ್ತಾರೆ. ಅಕ್ಕಪಕ್ಕದವರು ಪ್ರಶ್ನಿಸಿದರೆ ನಿಮಗ್ಯಾಕೆ ಎಂದು ಅವರ ಮೇಲೆ ಮುಗಿಬೀಳುತ್ತಾರೆ.  

ಪಾರ್ಟಿ ಮಾಡಿದವರು ಮದ್ಯ ಮತ್ತು ನೀರಿನ ಖಾಲಿ ಬಾಟಲುಗಳು, ಸಿಗರೇಟ್ ಖಾಲಿ ಪ್ಯಾಕ್ ಗಳು, ಪ್ಲಾಸ್ಟಿಕ್ ಲೋಟ, ತಟ್ಟೆಗಳನ್ನು ನಿವೇಶನದಲ್ಲೇ ಬಿಸಾಕುತ್ತಾರೆ. ಗಾಳಿಗೆ ತ್ಯಾಜ್ಯ ಸುತ್ತಮುತ್ತಲು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಸುತ್ತಮುತ್ತಲಿನ ಮನೆಗಳ ಬಾಗಿಲು, ಆವರಣದ ಒಳಗೂ ಹರಡಿರುತ್ತದೆ. ಹೊಸ ಬಡಾವಣೆಗಳಲ್ಲಿ ನೂತನ ಕಟ್ಟಡಗಳು ನಿರ್ಮಾಣ ಕಾಮಗಾರಿಗಳು ನಡೆಯುತ್ತವೆ. 

ನಗರಸಭೆಗೆ ದೂರು ನೀಡಿದರೆ, ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಸರ್ಕಾರಿ ಒಡೆತನದ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಗರಸಭೆಯ ಜವಾಬ್ದಾರಿ. ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ದಂಡ ವಿಧಿಸಲಾಗುವುದು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ದಂಡ ವಿಧಿಸಲಾಗುವುದು

ನಿವೇಶನದಲ್ಲಿ ಯಾರೂ ಕಸ ಸುರಿಯದಂತೆ ಮತ್ತು ಅಕ್ರಮ ಚಟುವಟಿಕೆ ನಡೆಸದಂತೆ ನಿಯಮವಿದೆ. ಮಾಲೀಕರು ನಿವೇಶನದ ಸುತ್ತಲೂ ತಡೆಗೋಡೆ ನಿರ್ಮಿಸಿಕೊಳ್ಳಬೇಕು. ನಿವೇಶನದ ಮಾಲೀಕರನ್ನು ಪತ್ತೆ ಮಾಡಿ ಸೂಚನೆ ನೀಡಲಾಗುವುದು. ಪಾಲಿಸದಿದ್ದರೆ ದಂಡ ವಿಧಿಸಲಾಗುವುದು.

-ಮಾಧವಿ ಪೌರಾಯುಕ್ತೆ ನಗರಸಭೆ ಚಿಂತಾಮಣಿ

ನಾಗರಿಕರೂ ಅರ್ಥಮಾಡಿಕೊಳ್ಳಬೇಕು

ನಗರದಲ್ಲಿ ಕಸ ಸಂಗ್ರಹಣೆಗಾಗಿ ಮನೆ ಮನೆಗೂ ಸಂಗ್ರಹಣೆಕಾರರು ಬರುತ್ತಾರೆ. ಹಸಿಕಸ ಮತ್ತು ಒಣಕಸ  ಬೇರ್ಪಡಿಸಿ ನೀಡಬೇಕು. ರಸ್ತೆ ಚರಂಡಿ ಸುತ್ತಮುತ್ತಲಿನ ನಿವೇಶನಗಳಿಗೆ ತ್ಯಾಜ್ಯ ಸುರಿಯಬಾರದು ಎಂದು ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸಲಾಗಿದೆ. ನಾಗರಿಕರು ಅರ್ಥಮಾಡಿಕೊಳ್ಳಬೇಕು. ನಗರ ಸ್ವಚ್ಛವಾಗಿಡಲು ನಗರಸಭೆಯೊಂದಿಗೆ ಕೈಜೋಡಿಸಬೇಕು.

-ರೇಖಾ ಉಮೇಶ್ ನಗರಸಭೆಯ ಮಾಜಿ ಅಧ್ಯಕ್ಷೆ ಚಿಂತಾಮಣಿ

ಕಠಿಣ ಕ್ರಮವಹಿಸದ ನಗರಸಭೆ

ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದವರಿಗೆ ನಗರಸಭೆ ನೋಟಿಸ್ ಕೊಟ್ಟು ಎಚ್ಚರಿಸಬೇಕು. ಅದಕ್ಕೂ ಜಗ್ಗದವರಿಗೆ ದಂಡ ವಿಧಿಸಬೇಕು. ನಗರಸಭೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆ ಅಧಿಕಾರಿಗಳು ನಿವೇಶನಗಳ ಮಾಲೀಕರ ಕಡೆ ಕೈತೋರುತ್ತಾರೆ. ನಿವೇಶನಗಳ ಮಾಲೀಕರು ಪತ್ತೆಯಾಗುವುದಿಲ್ಲ. ಖಾಲಿ ನಿವೇಶನಗಳು ಕಸದ ತಿಪ್ಪೆಗಳಾಗುತ್ತಿವೆ.

-ರಾಮಯ್ಯ, ನಿವೃತ್ತ ಶಿಕ್ಷಕ ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT