ಶನಿವಾರ, ನವೆಂಬರ್ 28, 2020
18 °C

ಆವರಿಸಿದ ಮಂಜು: ಸವಾರರಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಪಟ್ಟಣದಲ್ಲಿ ಬುಧವಾರ ಮುಂಜಾನೆ ಎದ್ದು ಮನೆಯಿಂದ ಹೊರಟವರಿಗೆ ಕವಿದಿದ್ದ ದಟ್ಟ ಮಂಜು ರಸ್ತೆಯನ್ನು ಮಬ್ಬಾಗಿಸಿತ್ತು. ಈ ವಾತಾವರಣ ಹಲವು ಮಂದಿಯನ್ನು ಪುಳಕಿತಗೊಳಿಸಿತು. 

ಈಗ ಗ್ರಾಮೀಣ ಭಾಗದಲ್ಲಿ ಚಳಿಗಾಲದ ಚಿತ್ರಣ ಮೂಡಿದೆ. ಬೆಳಿಗ್ಗೆಯೇ ಸುಣ್ಣದ ತಿಳಿಯಂತೆ ಆಕಾಶದಿಂದ ಕೆಳಗಿಳಿಯುವ ಮಂಜು. ಅದನ್ನು ಭೇದಿಸಿಕೊಂಡು ಮುನ್ನುಗ್ಗಲು ಹೊರಟರೆ ತಲೆಯಿಂದ ಸಣ್ಣಗೆ ಜಿನುಗುವ ಇಬ್ಬನಿ. ಆಕಾಶದಲ್ಲಿ ಸೂರ್ಯ ಬೂದಿಯೊಳಗಿನ ಬೆಂಕಿಯ ಕೆಂಡದಂತೆ ಕಾಣುತ್ತಾನೆ.  

ಮಂಜಿನ ಆರ್ಭಟ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಬೆಳಿಗ್ಗೆ 8ಗಂಟೆಯಾದರೂ ಮಂಜು ಸುರಿಯುತ್ತಲೇ ಇರುತ್ತದೆ. ಇದರಿಂದ ಪಾರಾಗಲು ವಾಹನ ಸವಾರರು ಲೈಟ್‌ಗಳನ್ನು ಹಾಕಿಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ. ವಾಹನಗಳು ತೀರಾ ಸಮೀಪಕ್ಕೆ ಬರುವ ತನಕವೂ ಕಾಣಿಸುವುದಿಲ್ಲ. ಹಾಗಾಗಿ, ಅ‍ಪಘಾತಗಳಾಗುವ ಆತಂಕವೂ ಸವಾರರಿಗೆ ಕಾಡುತ್ತಿದೆ.

ವಾಯುವಿಹಾರಿಗಳಿಗೆ ಮಂಜು ಮುದ ನೀಡುತ್ತಿದೆ. ಸಂಜೆಯಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿಯಿಂದ ಪಾರಾಗಲು ಜನರು ಕಂಬಳಿ ಹೊದ್ದುಕೊಂಡು ಮಲಗುತ್ತಾರೆ. ಸೂರ್ಯ ಉದಯಿಸಿದರೂ ಚಳಿಯ ಪರಿಣಾಮ ಮನೆಯಲ್ಲಿ ಬೆಚ್ಚಗೆ ಮಲಗುತ್ತಾರೆ. ದಿನಪೂರ್ತಿ ಚಳಿಯ ವಾತಾವರಣ ಕಳೆಯಲು ಮನೆಯ ಕಪಾಟಿನಲ್ಲಿ ಬೆಚ್ಚಿಗೆ ಕುಳಿತಿದ್ದ ಉಲ್ಲನ್ ಹೊದಿಕೆಗಳು ಈಗ ಹೊರಬಂದಿವೆ.

ಈ ವರ್ಷ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಮಳೆಯಾಗಿದೆ. ವಾತಾವರಣದಲ್ಲಿ ತೇವಾಂಶವೂ ಹೆಚ್ಚಾಗಿದೆ. ವರ್ಷಕ್ಕೊಮ್ಮೆ ಬರುವ ಚಳಿರಾಯ ಒಂದಷ್ಟು ದಿನಗಳು ಗ್ರಾಮೀಣರಿಗೆ ತೊಂದರೆ ಕೊಡುವುದು ನಿಶ್ಚಿತ. ಅತಿಯಾಗಿ ಕಾಡಿ ಕಾಯಿಲೆಗೆ ಕೆಡವಿ ಕಷ್ಟಗಳಿಗೆ ಗುರಿ ಮಾಡದಿರಲಿ ಎಂಬುದು ಗ್ರಾಮೀಣರ ಆಶಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.