ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಕವಿ ಗದ್ದರ್‌ ನಿಧನ: ವಿವಿಧ ಸಂಘಟನೆಗಳ ಮುಖಂಡರಿಂದ ಶ್ರದ್ಧಾಂಜಲಿ

Published 6 ಆಗಸ್ಟ್ 2023, 15:03 IST
Last Updated 6 ಆಗಸ್ಟ್ 2023, 15:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಾಮಾಜಿಕ ಹೋರಾಟಗಾರ ಹಾಗೂ ಕ್ರಾಂತಿಗೀತೆಗಳ ಗಾಯಕ ಗದ್ದರ್ ನಿಧನಕ್ಕೆ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಗದ್ದರ್ ಹೋರಾಟವನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಮಾತನಾಡಿ, ‘ಭಾರತದ ಚರಿತ್ರೆಯಲ್ಲಿ ಗದ್ದರ್ ಹೆಸರು ಚಿರಸ್ಥಾಯಿ ಆಗಿದೆ. ಎಂಜಿನಿಯರಿಂಗ್ ಪದವೀಧರರಾದ ಅವರು ತೆಲಂಗಾಣ ಹೋರಾಟ ಸೇರಿದಂತೆ ದಮನಿತರು, ಶೋಷಿತರ ಪರ ಹೋರಾಟಗಳ ಮೂಲಕ ಕೆಂಪು ಸೂರ್ಯನ ರೀತಿ ಕಾಣಿಸಿಕೊಂಡರು ಎಂದರು. 

ಬುದ್ಧ, ಅಂಬೇಡ್ಕರ್, ಕಾರ್ಲ್ ಮಾಕ್ಸ್ ವಿಚಾರಗಳಿಂದ ಪ್ರಭಾವಿತರಾಗಿದ್ದ ಅವರು ಧ್ವನಿ ಇಲ್ಲದವರ ಪರವಾಗಿ ಹೋರಾಟಗಳನ್ನು ನಡೆಸಿದರು. ಸಾಮಾಜಿಕ ಹೋರಾಟದ ಧ್ರುವತಾರೆ ಗದ್ದರ್ ಎಂದು ಪ್ರಶಂಸಿಸಿದರು.

80ರ ದಶಕದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ದಲಿತ ಹೋರಾಟಗಳಲ್ಲಿ ಭಾಗಿ ಆಗಿದ್ದಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕದ ದುರ್ಬಲ ವರ್ಗಗಳು, ದಲಿತರು, ಶೋಷಿತರ ಪರವಾಗಿ ಗದ್ದರ್ ಧ್ವನಿ ಇತ್ತು ಎಂದು ಹೇಳಿದರು.

ಕನ್ನಡ ನಾಡಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಗದ್ದರ್ ಭುವನೇಶ್ವರಿಯ ಬಗ್ಗೆ ಹಾಡು ಕಟ್ಟಿದ್ದಾರೆ. ನನ್ನ ಕಂಠದಲ್ಲಿ 10 ಸಾವಿರ ಗೀತೆಗಳು ಇವೆ ಎನ್ನುತ್ತಿದ್ದರು. ಅವರು ಹೋರಾಟದ ಹಾದಿಯಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು. ಗದ್ದರ್ ಅವರ ಹತ್ಯೆಗೆ ಪ್ರಯತ್ನಗಳು ಸಹ ನಡೆದವು. ಆದರೆ ಯಾವುದೇ ರೀತಿಯಲ್ಲಿ ರಾಜಿಯಾಗದೆ ಹೋರಾಟ ನಡೆಸಿದರು ಎಂದು ಸ್ಮರಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್, ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಸರ್ದಾರ್ ಚಾಂದ್ ಪಾಷ, ಶ್ರೀನಿವಾಸ್ ಮತ್ತಿತರರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT