ಜು.10 ರಂದು ಪ್ರಸನ್ನಾನಂದಪುರಿ ಸ್ವಾಮೀಜಿಗೆ ಅಭಿನಂದನೆ

ಬುಧವಾರ, ಜೂಲೈ 17, 2019
23 °C
ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಏರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ

ಜು.10 ರಂದು ಪ್ರಸನ್ನಾನಂದಪುರಿ ಸ್ವಾಮೀಜಿಗೆ ಅಭಿನಂದನೆ

Published:
Updated:

ಚಿಕ್ಕಬಳ್ಳಾಪುರ: ‘ಪರಿಶಿಷ್ಟ ಪಂಗಡಕ್ಕೆ ನೀಡಿರುವ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಏರಿಸಬೇಕು ಎಂಬ ಹೋರಾಟದ ನೇತೃತ್ವ ವಹಿಸಿದ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಜುಲೈ 10 ರಂದು ಚಿಕ್ಕಬಳ್ಳಾಪುರದಲ್ಲಿ ಅಭಿನಂದನಾ ಸಭೆ ಏರ್ಪಡಿಸಲಾಗಿದೆ’ ಎಂದು ವಾಲ್ಮಿಕಿ ನಾಯಕ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ವಿ.ಗವಿರಾಯಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಪಂಗಡಕ್ಕೆ ಈಗಾಗಲೇ 2004 ರಿಂದ ಕೇಂದ್ರ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಶೇ 7.5 ಮೀಸಲಾತಿ ಎಲ್ಲ ರಂಗಗಳಲ್ಲೂ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಕಳೆದ 40 ವರ್ಷಗಳಿಂದ ಬರೀ ಶೇ 3 ರಷ್ಟು ಮಾತ್ರ ನೀಡುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರದ ಮಾದರಿಯಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಸುಮಾರು 50 ರಿಂದ 60 ಲಕ್ಷದಷ್ಟಿದೆ. ಅಂಬೇಡ್ಕರ್‌ ಅವರು ಹೇಳಿರುವಂತೆ ಮತ್ತು ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಮೀಸಲಾತಿ ಹೆಚ್ಚಿಸಲೇ ಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಲಾಗಿದೆ’ ಎಂದು ಹೇಳಿದರು.

ಸಂಘದ ಗೌರಿಬಿದನೂರು ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಾಬು ಮಾತನಾಡಿ, ‘ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿ ಎಂದು ಈವರೆಗೆ ಮನವಿ ಮಾಡಿಕೊಳ್ಳುತ್ತ ಬಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರ ಈ ಕ್ರಮವನ್ನು ನ್ಯಾಯಾಲಯದಲ್ಲಿ ಕೂಡ ಪ್ರಶ್ನಿಸಲಾಗಿದೆ. ಇತ್ತೀಚೆಗೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದೆ’ ಎಂದು ತಿಳಿಸಿದರು.

‘ನಮ್ಮ ಮನವಿ ಪುರಸ್ಕರಿಸಿ ರಾಜ್ಯ ಸರ್ಕಾರ ಎರಡು ತಿಂಗಳ ಗಡುವಿನೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಲಾಗುತ್ತದೆ’ ಎಂದರು.

ಸಂಘದ ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಗೂಳೂರು ಲಕ್ಷ್ಮಿನಾರಾಯಣ ಮಾತನಾಡಿ, ‘ಮೀಸಲಾತಿ ಭಿಕ್ಷೆಯಲ್ಲ. ಸಂವಿಧಾನ ನಮಗೆ ನೀಡಿರುವ ಹಕ್ಕು. ಆದರೆ ನಮಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ನೀಡದೆ ಮತಕ್ಕಾಗಿ ಮಾತ್ರ ತುಷ್ಟೀಕರಣ ಮಾಡುತ್ತ ಬಂದಿದ್ದಾರೆ. ನಮಗೆ ಬೇಟೆ ಆಡುವುದು ಗೊತ್ತು, ನ್ಯಾಯ ಪಡೆಯುವುದು ಗೊತ್ತು’ ಎಂದು ಹೇಳಿದರು.

ಸಮಾಜದ ಮುಖಂಡರಾದ ಆವಲಕೊಂಡರಾಯಪ್ಪ, ಅಶ್ವತ್ಥನಾರಾಯಣಪ್ಪ, ನಾಗರಾಜ್, ಮುರುಳಿ, ಪಿ.ಮುನಿವೆಂಕಟಸ್ವಾಮಿ, ಜಿ.ಎ.ಮೂರ್ತಿ, ನರಸಿಂಹಮೂರ್ತಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !