ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ | ಪ್ರತಿಭೆ ಹೊರತರಲು ಶಿಕ್ಷಕರು ಶ್ರಮಿಸಲಿ

Last Updated 20 ಸೆಪ್ಟೆಂಬರ್ 2019, 13:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಕ್ಕಳನ್ನು ಮನೆ ಮತ್ತು ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಓದಿನ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ತಿಳಿಸಿದರು.

ನಗರದ ಸರ್.ಎಂ.ವಿ.ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಆದರೆ, ಬಹುತೇಕರು ಕೀಳರಿಮೆಯಿಂದ ಸದಾ ಹಿಂದುಳಿದಿರುತ್ತಾರೆ. ಅಂತಹವರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿದಾಗ ಮಾತ್ರ ಹೊಸ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯವಾಗುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರು ಶ್ರಮಿಸಬೇಕು’ ಎಂದು ಹೇಳಿದರು.

ಸರ್.ಎಂ.ವಿ.ಸ್ಮಾರಕ ದತ್ತಿ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ‘ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿ. ಇದು ಕೇವಲ ಒಂದು ತಿಂಗಳ ಕಾರ್ಯಕ್ರಮವಾಗಬಾರದು. ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಶಾಲಾ ಹಂತದಲ್ಲಿ ಸೂಕ್ತ ಮಾರ್ಗದರ್ಶನ, ನಿರಂತರ ಅಭ್ಯಾಸ, ಸ್ಪರ್ಧೆಗಳು ನಡೆಯುತ್ತಿರಬೇಕು’ ಎಂದರು.

ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವಿಕೆ, ಅಭಿನಯ ಗೀತೆ, ಭಕ್ತಿ ಗೀತೆ, ಕವ್ವಾಲಿ, ಛದ್ಮವೇಷ, ಆಶುಭಾಷಣ, ದೇಶಭಕ್ತಿ ಗೀತೆ, ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಭಾಷಣ, ಮಿಮಿಕ್ರಿ, ಭರತನಾಟ್ಯ, ಚರ್ಚಾ ಸ್ಪರ್ಧೆ, ನೃತ್ಯ, ಸಂಗೀತ, ರಂಗೋಲಿ, ದೃಶ್ಯ ಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿಜೇತರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ನಾರಾಯಣಸ್ವಾಮಿ, ತಾಲ್ಲೂಕು ಘಟಕ ಅಧ್ಯಕ್ಷ ರಾಮಶೇಷಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT