ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ ನಗರಸಭೆ: ಕುಂದುಕೊರತೆ ಸಭೆ

Published 16 ಜೂನ್ 2023, 14:02 IST
Last Updated 16 ಜೂನ್ 2023, 14:02 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಇಲ್ಲಿನ ನಗರಸಭೆ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಸಭೆ ನಡೆಯಿತು. 

ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ‘ಸೋಮವಾರ ಬೆಳಗ್ಗೆಯಿಂದಲೇ ನಗರದಲ್ಲಿ ಸ್ವಚ್ಛತೆ ಆಂದೋಲನ ಪ್ರಾರಂಭವಾಗಬೇಕು. ನಗರಸಭೆ ಸಿಬ್ಬಂದಿ, ವಾಹನ, ಜೆಸಿಬಿ ಏನೇ ಕೊರತೆಯಿದ್ದರೂ ನಾನು ಹೊರಗಡೆಯಿಂದ ತರಿಸುತ್ತೇನೆ. ಒಂದು ವಾರದ ಒಳಗೆ ನಗರ ಸ್ವಚ್ಛಗೊಳ್ಳಬೇಕು’ ಎಂದು ನಗರಸಭೆ ಸಿಬ್ಬಂದಿಗೆ ತಿಳಿಸಿದರು. 

‘ನಗರಸಭೆ ಅಧಿಕಾರಿಗಳು ಆಯಾ ವಾರ್ಡುಗಳ ಸದಸ್ಯರ ಸಹಕಾರ ಪಡೆದು ಮತ್ತು ಜೊತೆಗೂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.  ನಾನೂ ನಿಮ್ಮೊಂದಿಗೆ ಇರುತೇನೆ’ ಎಂದು ಹೇಳಿದರು. 

‘ಜನ ಸಾಮಾನ್ಯರು ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲಿ ಎಂಬ ಕಾರಣಕ್ಕೆ ನಗರಸಭೆ ಸದಸ್ಯರಿಗೆ ಮತ ನೀಡಿ ಆಯ್ಕೆ ಮಾಡಿದ್ದಾರೆ. ತಮ್ಮ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯಗಳನ್ನು ಸರಿಪಡಿಸಬೇಕು. ನಗರಸಭೆ ಹಲವು ಸಮಸ್ಯೆಗಳಿಂದ ತುಂಬಿರುವುದು ಗಮನಕ್ಕೆ ಬಂದಿದೆ. ಎಲ್ಲವನ್ನೂ ಒಂದೇ ಬಾರಿಗೆ ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಸರಿಪಡಿಸಬೇಕು. ಮೊದಲು ನಗರವನ್ನು ಸ್ವಚ್ಛಗೊಳಿಸಬೇಕು. ನಂತರ ಕುಡಿಯುವ ನೀರು, ಒಳಚರಂಡಿ ಸ್ವಚ್ಛತೆಗೆ ಮುಂದಾಗಬೇಕು. ಇದರಲ್ಲಿ ಪಕ್ಷ ಮತ್ತು ರಾಜಕೀಯವನ್ನು ಬದಿಗಿಡಬೇಕು’ ಎಂದು ತಿಳಿಸಿದರು. 

ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಪೌರಾಯುಕ್ತ ಆರ್. ಶ್ರೀಕಾಂತ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಹಾಗೂ ನಾಗರಿಕರು ಭಾಗವಹಿಸಿದ್ದರು.

ಸಮಸ್ಯೆಗಳ ಸುರಿಮಳೆ

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಸಾರ್ವಜನಿಕರ ಕುಂದುಕೊರತೆ ಹಾಗೂ ನಗರಸಭೆ ಸದಸ್ಯರ ಸಭೆಯಲ್ಲಿ ಸಮಸ್ಯೆಗಳ ಸುರಿ ಮಳೆಯಾಯಿತು. ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ನಗರಸಭೆ ಸದಸ್ಯರೇ ತಮ್ಮ ಅಳಲು ತೋಡಿಕೊಂಡರು.  ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ ಹಾಗೂ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆಯೇ ಇಲ್ಲವಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು ಅಭಿವೃದ್ದಿ ಮರೀಚಿಕೆಯಾಗಿದೆ ಎಂಜು ನಾಗರಿಕರೊಬ್ಬರು ಆರೋಪಿಸಿದರು. ನಗರಸಭೆ ಸದಸ್ಯ ಮೌಲ ಮಾತನಾಡಿ ‘ನಗರದಲ್ಲಿ ಸಾಕಷ್ಟು ವಾರ್ಡ್‌ಗಳಲ್ಲಿರುವ ಮನೆ ನಿವೇಶನಗಳಿಗೆ ಹಕ್ಕುಪತ್ರ ಸೇರಿ ಯಾವುದೇ ರೀತಿಯ ದಾಖಲೆ ಮತ್ತು ಖಾತೆ ಇಲ್ಲ. ಇದರಿಂದ ನಾಗರಿಕರಿಗೆ ಬ್ಯಾಂಕ್ ಸಾಲ ಸೇರಿ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT