ಶನಿವಾರ, ಜನವರಿ 25, 2020
28 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ನಾಗಾಂಬಿಕಾದೇವಿ ಸೂಚನೆ

ರೇಷ್ಮೆ ಜವಳಿ ಉದ್ಯಮ ಉತ್ತೇಜಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಜಿಲ್ಲೆಯಲ್ಲಿ ರೇಷ್ಮೆ ಬೇಸಾಯಕ್ಕೆ ಉತ್ತೇಜಿಸುವ ಮೂಲಕ ಜಿಲ್ಲೆಯ ಜವಳಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ನಾಗಾಂಬಿಕಾದೇವಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಜತೆಗೇ ರೇಷ್ಮೆ ಉತ್ಪನ್ನಗಳ ಅಭಿವೃದ್ಧಿ ಹಾಗೂ ಮಾರಾಟಕ್ಕೆ ವೇದಿಕೆ ಕಲ್ಪಿಸಬೇಕು. ನೇಕಾರರಿಗೆ ಪ್ರಸಕ್ತ ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ಕೌಶಲ ತರಬೇತಿ ಕೊಡಿಸುವ ಮೂಲಕ ರೇಷ್ಮೆ ಜವಳಿ ಉದ್ಯಮ ಪ್ರೋತ್ಸಾಹಿಸುವ ಮೂಲಕ ನಿರುದ್ಯೋಗ ಕಡಿಮೆ ಮಾಡಲು ಮುಂದಾಗಬೇಕು’ ಎಂದರು.

‘ಜಿಲ್ಲೆಯಲ್ಲಿ ಯಥೇಚ್ಛವಾಗಿ ರೇಷ್ಮೆ ಉತ್ಪಾದನೆ ಮಾಡಿ, ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೆ ರಪ್ತು ಮಾಡುವ ಬದಲು, ಜಿಲ್ಲೆಯಲ್ಲಿಯೇ ರೇಷ್ಮೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ, ರೇಷ್ಮೆ ವಸ್ತ್ರ ವಿನ್ಯಾಸ ಮಳಿಗೆ, ಜವಳಿ ಉತ್ಪನ್ನ ಕೈಗಾರಿಕೆ ಹಾಗೂ ರೇಷ್ಮೆಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು. ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ಮಂಡಳಿಗಳ ಸದಸ್ಯೆಯರಿಗೆ ವಸ್ತ್ರ ವಿನ್ಯಾಸದ ತರಬೇತಿ ನೀಡಿ ರೇಷ್ಮೆ ಉದ್ಯಮವನ್ನು ಹೆಚ್ಚು ಅಭಿವೃದ್ಧಿಪಡಿಸಬೇಕು’ ಎಂದು ತಿಳಿಸಿದರು.

‘ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ನಗರ ಹಾಗೂ ಗ್ರಾಮ ಮಟ್ಟದ ಜನರಿಗೆ ಜೀವನೋಪಾಯಕ್ಕೆ ಉದ್ಯೋಗ ಕಲ್ಪಿಸಬೇಕು. ಸಾವಯವ ಕೃಷಿಗೆ ತರಬೇತಿ ನೀಡುವುದರ ಮೂಲಕ ರೈತರ ಜೀವನಮಟ್ಟ ಸುಧಾರಿಸಲು ಅಧಿಕಾರಿಗಳು ಶ್ರಮಿಸಬೇಕು. ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಬೇಕು. ಹಾಲಿನ ಉತ್ಪಾದನೆಗೆ ಆದ್ಯತೆ ನೀಡಬೇಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಅಡಿ ಆರ್ಥಿಕ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸುವವರಿಗೆ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ 24 ಗಂಟೆಗಳ ಕಾಲ ಸಹಾಯವಾಣಿ ತೆರೆದು, ಎಸ್ಪಿ ಅವರಿಗೆ ದೂರನ್ನು ಸಲ್ಲಿಸುವ ಅವಕಾಶ ಮಾಡಬೇಕು. ಹಳ್ಳಿಗಳಲ್ಲಿ, ಬಸ್ ತಂಗುದಾಣಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿಯ ಸೌಲಭ್ಯ ಅಳವಡಿಸಬೇಕು. ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಭದ್ರತೆ ವ್ಯವಸ್ಥೆ ಪರಿಶೀಲಿಸುವ ಕೆಲಸಗಳು ನಡೆಯಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು