ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ನೀರಿಲ್ಲದೆ ಒಣಗುತ್ತಿದೆ ಬೆಳೆ; ರೈತರ ಆಕ್ರೋಶ– ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ
Last Updated 26 ಮೇ 2020, 17:10 IST
ಅಕ್ಷರ ಗಾತ್ರ

ಚಿಂತಾಮಣಿ: ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ನೂರಾರು ರೈತರು ಮಂಗಳವಾರ ನಗರದ ಕನಂಪಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗೋಪಾಲಪುರ, ಕೊತ್ತೂರು, ತಿಮ್ಮಸಂದ್ರ, ಬುಕ್ಕನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಈಚೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ದಿನಕ್ಕೆ 7 ಗಂಟೆ ಕಾಲ ವಿದ್ಯುತ್ ಸರಬರಾಜು ಮಾಡುತ್ತಿದ್ದರು. ಈಗ ಬೆಳಿಗ್ಗೆ 2 ಗಂಟೆ ಹಾಗೂ ರಾತ್ರಿ 1 ಗಂಟೆ ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ದಿನಕ್ಕೆ 3 ಗಂಟೆ ವಿದ್ಯುತ್ ನೀಡಿದರೆ ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ಹೇಗೆ ನೀರು ಹಾಯಿಸುವುದು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಲಾಕ್‌ಡೌನ್‌ನಿಂದ ರೈತರು ಬೆಳೆದ ಬೆಳೆಗಳು ತೋಟಗಳಲ್ಲೇ ಕೊಳೆತವು. ಈಗ ರೈತರು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ, ವಿದ್ಯುತ್ ಸರಬರಾಜು ಇಲ್ಲದೆ ಬೆಳೆಗಳನ್ನು ನಾಟಿ ಮಾಡಲು ಹಾಗೂ ಇರುವ ಬೆಳೆಗಳಿಗೆ ನೀರು ಹರಿಸಲು ತೊಂದರೆ ಆಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೈಗಾರಿಕೆಗಳ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ರೈತರಿಗೆ ಹೆಚ್ಚಿನ ವಿದ್ಯುತ್ ನೀಡಬೇಕು ಎಂದು ಸಂಘಟನೆಗಳ ರಾಜ್ಯ ಮುಖಂಡರು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಂದ ಉಳಿತಾಯವಾಗುವ ವಿದ್ಯುತ್ ಅನ್ನು ರೈತರಿಗೆ ನೀಡುತ್ತಾರೆ ಎಂಬ ನಿರೀಕ್ಷೆಯಿಂದ ಹೆಚ್ಚಿನ ಬೆಳೆಗಳನ್ನು ಬಿತ್ತಲಾಗಿತ್ತು. ಆದರೆ, ಈಗ ಹಿಂದೆ ನೀಡುತ್ತಿದ್ದ ವಿದ್ಯುತ್ ಅನ್ನು ಸಹ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಹಾಯಕ ಎಂಜಿನಿಯರ್ ಮುರಳಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಕೆಲವು ತಾಂತ್ರಿಕ ತೊಂದರೆಗಳಿಂದ ಹೀಗಾಗಿದೆ. ಇದು ತಾತ್ಕಾಲಿಕ. ಶೀಘ್ರ ಮೊದಲಿನಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಒಂದು ವಾರ ಕಾಯಲಾಗುವುದು. ಆಗಲೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂಬ ಹೇಳಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ರೈತ ಮುಖಂಡರಾದ ಸತ್ಯಪ್ರಕಾಶ್, ಜೆ.ವಿ.ರಘುನಾಥರೆಡ್ಡಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT