ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೂರು ಪಂಚಾಯಿತಿ ಎದುರು ಪ್ರತಿಭಟನೆ

30 ವರ್ಷಗಳಿಂದ ಸ್ವಾಧೀನದಲ್ಲಿರುವವರನ್ನು ಬಿಟ್ಟು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಆರೋಪ
Last Updated 21 ಮೇ 2020, 12:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗ್ರಾಮ ಠಾಣಾ ಜಾಗದಲ್ಲಿ ಕಳೆದ 30 ವರ್ಷಗಳಿಂದ ಸ್ವಾಧೀನದಲ್ಲಿರುವವರನ್ನು ಬಿಟ್ಟು, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು, ಭ್ರಷ್ಟಾಚಾರ ನಡೆಸಿ ನಕಲಿ ದಾಖಲೆಗಳ ಮೂಲಕ ಸ್ವಾಧೀನದಲ್ಲಿ ಇಲ್ಲದವರ ಹೆಸರಿಗೆ ಖಾತೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರೈತಸಂಘದ ಪದಾಧಿಕಾರಿಗಳು ಗುರುವಾರ ತಾಲ್ಲೂಕಿನ ಅರೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಎ.ಮಂಜುನಾಥ್, ‘ಗ್ರಾಮದ ಠಾಣಾ ಜಾಗದಲ್ಲಿ ಸುಮಾರು 25 ಚದರಡಿ ಜಾಗದಲ್ಲಿ ಗರಿಗ ವೆಂಕಟರೆಡ್ಡಿ ಎಂಬುವರು ಸುಮಾರು 30 ವರ್ಷಗಳಿಂದ ಸ್ವಾಧೀನದಲ್ಲಿದ್ದಾರೆ. ಆದರೆ, ಈ ಹಿಂದಿನ ಪಿಡಿಒ ಅವರು ಆ ಜಾಗಕ್ಕೆ 2015–16ನೇ ಸಾಲಿನಲ್ಲಿ ನಕಲಿ ದಾಖಲೆಗಳ ಮೂಲಕ ಸ್ವಾಧೀನದಲ್ಲಿ ಇಲ್ಲದವರ ಹೆಸರಿನಲ್ಲಿ ಹೌಸ್‌ಲಿಸ್ಟ್‌ಗೆ ಸೇರ್ಪಡೆಗೊಳಿಸಿದ್ದಾರೆ‘ ಎಂದು ಆರೋಪಿಸಿದರು.

‘ಗರಿಗವೆಂಕಟರೆಡ್ಡಿ ಅವರು ತಮ್ಮ ಅನುಭವದಲ್ಲಿರುವ ಜಾಗವನ್ನು ತಮಗೆ ಮಂಜೂರು ಮಾಡಿ, ಖಾತೆ ಮಾಡಿಕೊಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಆ ಅರ್ಜಿ ಪರಿಗಣಿಸಿಲ್ಲ. ಬದಲು ರಾಜಕೀಯ ಒತ್ತಡಕ್ಕೆ ಮಣಿದು ಬೋಗಸ್‌ ದಾಖಲೆಗಳ ಮೂಲಕ ಶಿಲ್ಪಾ ಶ್ರೀನಾಥ್‌ ಎಂಬುವರು ಹೆಸರಿನಲ್ಲಿ ಹೌಸ್‌ಲಿಸ್ಟ್‌ ದಾಖಲೆಗಳಲ್ಲಿ ಆ ಜಾಗ ನಮೂದಿಸಿದ್ಧಾರೆ’ಎಂದು ತಿಳಿಸಿದರು.

’ಶಿಲ್ಪಾ ಅವರ ಹೆಸರಿನಲ್ಲಿ ಜಾಗವನ್ನು ಹೌಸ್‌ಲಿಸ್ಟ್‌ಗೆ ಸೇರಿಸುವ ಪ್ರಸ್ತಾವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಮಂಡಿಸಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಕೂಡ ಮಾಡಿಲ್ಲ. ಆದರೂ ಹೌಸ್‌ಲಿಸ್ಟ್‌ ಪುಸ್ತಕದಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ತಮ್ಮ ಬಳಿ ಸಾಕ್ಷಿ ಇದೆ’ಎಂದು ಹೇಳಿದರು.

‘ಗ್ರಾಮ ಠಾಣಾ ಜಾಗೆ ಸರ್ವೆ ನಂಬರ್ 28/1 ಹೌಸ್‌ಲಿಸ್ಟ್ ಸೇರ್ಪಡೆ ಮಾಡಿದ್ದಾರೆ. ಅದಕ್ಕೆ ಇ–ಸ್ವತ್ತು ಇಲ್ಲ. ಆದರೆ, ಸರ್ವೇ ನಂಬರ್ 23/1 ಎಂದು ಇ–ಸ್ವತ್ತು ತೆಗೆದಿದ್ದಾರೆ. ಅದು ಹೌಸ್‌ಲಿಸ್ಟ್‌ನಲ್ಲಿಯೇ ಇಲ್ಲ. ಇದರಲ್ಲಿ ಈ ಹಿಂದಿನ ಪಿಡಿಒ ಮುನಿರಾಜು ಅವರು ಕೈವಾಡ ಇದೆ’ಎಂದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥರೆಡ್ಡಿ ಮಾತನಾಡಿ, ‘ಗರಿಗವೆಂಕಟರೆಡ್ಡಿ ಅವರು ಅನುಭವದಲ್ಲಿರುವ ಜಾಗವನ್ನು ತೆರವುಗೊಳಿಸುವಂತೆ ಶಿಲ್ಪಾ ಅವರು ಅರ್ಜಿ ಕೊಟ್ಟ ಕಾರಣಕ್ಕೆ ಅಧಿಕಾರಿಗಳು ಇದೀಗ ಜಾಗ ತೆರವಿಗೆ ಮುಂದಾಗಿದ್ದಾರೆ. ಇದು ಖಂಡನೀಯ’ಎಂದು ಹೇಳಿದರು.

’ಮೂಲದಿಂದ ಆ ಜಾಗದಲ್ಲಿ ಇರುವವರು ಅರ್ಜಿ ಕೊಟ್ಟಿದ್ದರೆ ಅದನ್ನು ಪರಿಗಣಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪಾರದರ್ಶಕವಾಗಿ ಕ್ರಮ ಕೈಗೊಳ್ಳಬೇಕು. ಬಡವರ ಮೇಲೆ ದೌರ್ಜನ್ಯ ಮಾಡುವುದು, ರಾಜಕೀಯ ಪ್ರಭಾವ ಇರುವವರಿಗೆ ಮಣೆ ಹಾಕುವುದು ಸರಿಯಲ್ಲ. ಸಮಸ್ಯೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ಎಂದು ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಅವರು ದಾಖಲೆ ಪರಿಶೀಲಿಸಿ ಕ್ರಮಕೈಗೊಳ್ಳಲು ಕಾಲಾವಕಾಶ ನೀಡಿ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಗರಿಗ ವೆಂಕಟರೆಡ್ಡಿ, ಮುಖಂಡರಾದ ಜಗದೀಶ್‌, ಮಂಜುನಾಥ್, ನಾರಾಯಣಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT