ಬಾಗೇಪಲ್ಲಿ: ತಾಲ್ಲೂಕಿನ ಗೌನಪಲ್ಲಿ ಗ್ರಾಮದ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಬೇಕು. ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಸ್ಮಶಾನಕ್ಕೆ ಜಾಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದಿಂದ ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಹೊರಟ ಪ್ರತಿಭಟನಾಕಾರರು ತಮಟೆ ಚಳವಳಿ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸಿದರು. ತಾಲ್ಲೂಕು ಆಡಳಿತವು ದಲಿತ, ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿದರು.
ಸಮಿತಿಯ ರಾಜ್ಯ ಸಂಚಾಲಕ ಕೆ.ಸಿ. ರಾಜಾಕಾಂತ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಡವರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ಮನೆ, ನಿವೇಶನ, ಚರಂಡಿ, ರಸ್ತೆ ಸೌಲಭ್ಯ ಕಲ್ಪಿಸಿಲ್ಲ. ಮೂಲ ಸೌಲಭ್ಯ ಪಡೆಯಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಅಂಬೇಡ್ಕರ್ ರಚಿಸಿರುವ ಸಂವಿಧಾನದಡಿ ಎಲ್ಲಾ ಸಮುದಾಯವರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ. ಆದರೆ, ಇಂದಿಗೂ ಸೌಲಭ್ಯ ಕಲ್ಪಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಕೋಮುವಾದ, ಬಡ ಕೃಷಿಕೂಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹತ್ಯೆ ನಡೆಯುತ್ತಿವೆ. ರೈತರ ಮೇಲೆ ಜೀಪು ಹತ್ತಿಸಿ ಹತ್ಯೆ ಮಾಡುವುದು ದೇಶಪ್ರೇಮವೇ ಎಂದು ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಗೌನಪಲ್ಲಿ ಬಳಿ ನಿವೇಶನ ಕಲ್ಪಿಸುವಂತೆ ಕಳೆದ 10 ವರ್ಷಗಳ ಹಿಂದೆಯೇ ಹೋರಾಟ ಮಾಡಲಾಗಿದೆ. ಆದರೆ ಇಂದಿಗೂ ನಿವೇಶನ, ಮನೆಗಳನ್ನು ನಿರ್ಮಿಸಿಲ್ಲ. ಜನರು ಸತ್ತರೆ ಹೂಳಲು ಜಾಗ ನೀಡಿಲ್ಲ. ಎಲ್ಲಾ ಸಮುದಾಯದವರಿಗೂ ನಿವೇಶನ, ಮನೆಗಳನ್ನು ಹಂಚಿಕೆ ಮಾಡಬೇಕು. ವಾಲ್ಮೀಕಿ, ಅಂಬೇಡ್ಕರ್ ಭವನಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರವಣ ಮಾತನಾಡಿ, ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕೇರಿಗಳಿಗೆ ಬಂದಿರುವ ಅನುದಾನಗಳಲ್ಲಿ ₹ 45 ಕೋಟಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಹೋರಾಟ ಮಾಡಿದ್ದೇವೆ. ಇದುವರಿಗೂ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಿಲ್ಲ ಎಂದು ದೂರಿದರು.
ದಲಿತ ಕಲಾ ಮಂಡಳಿಯ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿದರು. ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಡಿ.ಎ. ದಿವಾಕರ್ ಹಾಗೂ ಅಧಿಕಾರಿಗಳು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪೈಪಾಳ್ಯ ರವಿ, ಸಂಘಟನಾ ಸಂಚಾಲಕರಾದ ಎಲ್.ಎನ್. ನರಸಿಂಹಯ್ಯ, ಕೋಟಪ್ಪ, ಎಂ.ವಿ. ನರಸಿಂಹಪ್ಪ, ಗಂಗುಲಪ್ಪ, ಎಚ್.ಎನ್. ಗೋಪಿ, ಡಿ.ಕೆ. ರಮೇಶ್, ಪಿ. ನಾಗಪ್ಪ, ಜಿ. ಗಂಗಾಧರ, ಎ. ಪ್ರಕಾಶ್, ನರಸಿಂಹಯ್ಯ, ನರಸಿಂಹಮೂರ್ತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.