ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಚ್ಚುಕಟ್ಟು ಗ್ರಾಮಗಳಿಗೆ ನೀರು ಪೂರೈಸಿ’

ಭಕ್ತರಹಳ್ಳಿಅರಸೀಕೆರೆ ನೀರಾವರಿ ಯೋಜನೆ
Last Updated 1 ಡಿಸೆಂಬರ್ 2020, 3:23 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ರೂಪಿಸಿರುವ ಭಕ್ತರಹಳ್ಳಿಅರಸೀಕೆರೆ ಯೋಜನೆಯ ಅನುಷ್ಠಾನದ ಬಗ್ಗೆ ಹಾಗೂ ಜನಪ್ರತಿನಿಧಿಗಳ ಧೋರಣೆ ಕುರಿತು ಕೆರೆಯ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕೋಚಿಮುಲ್ ಸಭಾಂಗಣದಲ್ಲಿ ಕೆರೆಯ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ಮುಖಂಡರು, ರೈತ ಪ್ರತಿನಿಧಿಗಳು ಸಭೆ ಸೇರಿ ಬೇಡಿಕೆ ಈಡೇರಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ನಮ್ಮ ಕೆರೆ ನಮ್ಮ ಹಕ್ಕು. ನಮ್ಮ ಪೂರ್ವಿಕರು ನಿರ್ಮಿಸಿರುವ ಕೆರೆ. ಹೀಗಿದ್ದರೂ ನಾವು ಯೋಜನೆಯನ್ನು ವಿರೋಧಿಸದೆ ಸಹಕಾರ ನೀಡಿದ್ದೇವೆ. ಕೆರೆಯ ಬಳಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಬೇಕು. ಕೆರೆಯ ಸುತ್ತಮುತ್ತಲಿನ ಹಳ್ಳಿಗಳಿಗೂ ನೀರು ಕೊಡಬೇಕು ಎಂಬುದು ನಮ್ಮ ಬೇಡಿಕೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಪಕ್ಷಾತೀತವಾಗಿ ಯೋಜನೆಯ ಆರಂಭದಿಂದಲೂ ಬೇಡಿಕೆ ಮಂಡಿಸಿದ್ದೇವೆ ಎಂದು ಹೋರಾಟಗಾರ ಮುಖಂಡರು ತಿಳಿಸಿದರು.

ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಒಮ್ಮೆಯೂ ಗ್ರಾಮಸ್ಥರನ್ನು ಭೇಟಿ ಮಾಡಿಲ್ಲ. ಹಳ್ಳಿಯ ಜನರನ್ನು ಕಡೆಗಣಿಸಿ ನಗರಕ್ಕೆ ನೀರು ತೆಗೆದುಕೊಂಡು ಹೋಗುವ ತರಾತುರಿಯಲ್ಲಿದ್ದಾರೆ. ನಾವು ನ್ಯಾಯ ಕೇಳುತ್ತಿದ್ದೇವೆ. ನಮ್ಮ ಜತೆ ಕುಳಿತು ಚರ್ಚೆ ಮಾಡಲಿ ಎಂದು ಒತ್ತಾಯಿಸಿದರು.

ಚಿಂತಾಮಣಿಯ ಕನಂಪಲ್ಲಿ ಕೆರೆಯ ನೀರನ್ನು ಬೇರೆ ಕಡೆಗೆ ನೀಡಲು ನಗರಸಭೆ ಸದಸ್ಯರು ಒಪ್ಪುತ್ತಾರೆಯೇ, ನಮ್ಮ ಹಕ್ಕನ್ನು ನಾವು ಕೇಳಿದರೆ, ಚೇಲಾಗಳು, ಕ್ರಿಮಿನಲ್‌ಗಳು ಎಂದು ಆರೋಪಿಸಿದ್ದಾರೆ. ನಗರದಲ್ಲಿ ಸದಾ ಕಚೇರಿಗಳ ಸುತ್ತಮುತ್ತ ತಿರುಗಾಡಿಕೊಂಡು ದಳ್ಳಾಳಿ ಕೆಲಸ ಮಾಡುವ ಮತ್ತು ರಾಜಕಾರಣಿಗಳ ಹಿಂದೆ ಸುತ್ತಾಡಿಕೊಂಡಿರುವವರು ಚೇಲಾಗಳಾ, ದುಡಿದು ತಿನ್ನುವ ರೈತರು ಚೇಲಾಗಳಾ ಎಂಬುದನ್ನು ಆತ್ಮಾವಲೋಕನಾ ಮಾಡಿಕೊಳ್ಳಲಿ ಎಂದು ಜರಿದರು.

ತಹಶೀಲ್ದಾರ್ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ನಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿತ್ತು. ಸ್ಥಳೀಯ ಅಚ್ಚುಕಟ್ಟುದಾರರಿಗೆ ನೀರು ನೀಡಿ ನಂತರ ಇತರೆಡೆ ತೆಗೆದುಕೊಂಡು ಹೋಗಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಕಾನೂನಿನಲ್ಲಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದಾರೆ. ಹಳ್ಳಿಗಳಿಗೆ ಟೋಪಿ ಹಾಕಲು 5 ಹಳ್ಳಿಗಳನ್ನು ಯೋಜನೆಯಲ್ಲಿ ಸೇರಿಸಿದ್ದಾರೆ. ಶುದ್ಧೀಕರಣ ಘಟಕ ಸ್ಥಾಪಿಸಿದರೆ ವಾಪಸ್ ಹಳ್ಳಿಗಳಿಗೆ ಹೇಗೆ ನೀರು ತರುತ್ತಾರೆ ಎಂದು ಪ್ರಶ್ನಿಸಿದರು.

ಮುಖಂಡರಾದ ಅಲ್ಲಾ ಬಕಾಷ್, ನಾಗೇಶ್, ರೆಡ್ಡಪ್ಪ, ಮಂಜುನಾಥರೆಡ್ಡಿ, ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ರಾಜಕುಮಾರ್, ರಾಮಕೃಷ್ಣಪ್ಪ, ಮಿಲ್ಟ್ರಿ ಶಿವಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT