ಶನಿವಾರ, ಅಕ್ಟೋಬರ್ 24, 2020
18 °C
ಶಿಡ್ಲಘಟ್ಟ: ತುಂಬುತ್ತಿವೆ ತಾಲ್ಲೂಕಿನ ಕೆರೆಗಳು; ಕೋಡಿ ಹರಿದ ಕೆರೆಗಳು

ನೀರಿನ ಸಮಸ್ಯೆಗೆ ಮಳೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ನದಿ ನಾಲೆಗಳ ಆಸರೆಯಿಲ್ಲದ ಶಿಡ್ಲಘಟ್ಟ ತಾಲ್ಲೂಕಿನ ರೈತರಿಗೆ ಕೆರೆಗಳೇ ಜಲಮೂಲಗಳು. ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನ ಹಲವು ಕೆರೆಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸವನ್ನು ತಂದಿದೆ.

ಕೆರೆಗಳಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸುತ್ತದೆ. ತಾಲ್ಲೂಕಿನ ಅತಿದೊಡ್ಡ ಕೆರೆಗಳಾದ ರಾಮಸಮುದ್ರ ಕೆರೆ ಮತ್ತು ತಲಕಾಯಲಬೆಟ್ಟದ ವೆಂಕಟೇಶಸಾಗರ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರೆ, ಗಂಜಿಗುಂಟೆ ಗ್ರಾಮ ಪಂಚಾಯಿತಿಯ ರೆಡ್ಡಿ ಕೆರೆ ತುಂಬಿ ಕೋಡಿ ಹರಿದಿದೆ. ರಾಮಸಮುದ್ರ ಕೆರೆಯ ನೀರನ್ನು ಕುಡಿಯುವ ನೀರಿಗಾಗಿ ಬಳಸುವ ಯೋಜನೆ ಇನ್ನೂ ಕುಂಟುತ್ತಿದೆ.

ಬೆಂಗಳೂರು ನಗರದ ಹೆಬ್ಬಾಳ ಮತ್ತು ನಾಗವಾರ ಕೆರೆಗಳಿಂದ ಶುದ್ಧೀಕರಿಸಿದ ನೀರು ಜಿಲ್ಲೆಯ 44 ಕೆರೆಗಳಿಗೆ ಹರಿಸುವ ಎಚ್.ಎನ್.ವ್ಯಾಲಿ ಯೋಜನೆ ಪ್ರಗತಿಯಲ್ಲಿದ್ದು, ಜಿಲ್ಲೆಯ 16 ಕೆರೆಗಳು ಭಾಗಶಃ ತುಂಬಿದ್ದು, ತಾಲ್ಲೂಕಿನ ಕೆಲವು ಕೆರೆಗಳು ಈ ನೀರಿಗಾಗಿ ಎದುರುನೋಡುತ್ತಿವೆ.

ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಯಡಿ ತಾಲ್ಲೂಕಿನ ಕೆರೆಗಳ ಮರುಜೀವ ನೀಡುವ ಯೋಜನೆ ಸಹ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ಪುನರುಜ್ಜೀವ
ಗೊಂಡಿರುವ ತಾಲ್ಲೂಕಿನ ಕಲ್ಯಾಣಿಗಳು, ನೀರಿನ ಹೊಂಡ, ಕುಂಟೆ, ಚೆಕ್ ಡ್ಯಾಮ್, ಗೋಕುಂಟೆಗಳಲ್ಲಿ ಮುಂತಾದವುಗಳಲ್ಲಿ ಜಲಮರುಪೂರಣಗೊಳ್ಳುತ್ತಿದೆ. ವಿವಿಧ ಸರ್ಕಾರಿ ಕಟ್ಟಡಗಳಿಗೆ ಅಳವಡಿಸಿರುವ ಮಳೆ ಕೊಯ್ಲು ಸಹ ನೀರು ಸಂಗ್ರಹಣೆಯಲ್ಲಿ ಮುಂದಿದೆ.

‘ಶಿಡ್ಲಘಟ್ಟ ತಾಲ್ಲೂಕಿನ 203 ಕೆರೆಗಳನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಇವುಗಳ ಅಚ್ಚುಕಟ್ಟು ಪ್ರದೇಶ 3,406 ಎಕರೆಯಷ್ಟಿದೆ. ನಮ್ಮಲ್ಲಿ ಬಿದ್ದ ಮಳೆನೀರನ್ನು ನಾವು ಸಂಗ್ರಹಿಸುವ ಸಾಮರ್ಥ್ಯವನ್ನು ನಮ್ಮ ಜಲಮೂಲಗಳಿಗೆ ನೀಡಿದರೆ ಸಾಕು. ಅದು ನಮ್ಮನ್ನು ವರ್ಷ ಪೂರಾ ಸಲಹುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.