ಚಿಕ್ಕಬಳ್ಳಾಪುರ: ಪೂರ್ವ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಮೂರನೇ ಸ್ಥಾನಕ್ಕೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಶೇ 66.32ರಷ್ಟು ಸಮೀಕ್ಷೆ ಪೂರ್ಣವಾಗಿದೆ. ಹಾಸನ ಮತ್ತು ಚಿತ್ರದುರ್ಗ ಕ್ರಮವಾಗಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿವೆ.
ದ್ರಾಕ್ಷಿ, ಟೊಮೆಟೊ, ಮಾವು ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಪೂರ್ವ ಮುಂಗಾರಿನಲ್ಲಿ ಬೆಳೆ ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸಮೀಕ್ಷೆಗೆ ಒಳಪಡುವ ಒಟ್ಟು 1,40,881 ತಾಕುಗಳಿವೆ. ಇಲ್ಲಿಯವರೆಗೆ 93,433 ತಾಕುಗಳ ಸಮೀಕ್ಷೆ ಪೂರ್ಣವಾಗಿದೆ. 47,448 ತಾಕುಗಳ ಸಮೀಕ್ಷೆ ಬಾಕಿ ಇದೆ.
ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದು ಬೆಳೆ ಸಮೀಕ್ಷೆಗೆ ಅಡ್ಡಿಯಾಗಿದೆ. ರೈತರೇ ತಮ್ಮ ಆ್ಯಂಡ್ರಾಯ್ಡ್ ಮೊಬೈಲ್‌ನಿಂದ ಫ್ಲೆಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆಗೆ ಒಳಪಡಬಹುದು. ಆದರೆ, ಜಿಲ್ಲೆಯ ಮಳೆ ಬೀಳುತ್ತಿರುವುದು ಸಹ ರೈತರೇ ಸಮೀಕ್ಷೆ ನಡೆಸಲು ಅಡ್ಡಿಯಾಗಿದೆ. ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ರೈತರೇ ಮಾಹಿತಿಯನ್ನು ಹೆಚ್ಚು ಅಪ್‌ಲೋಡ್ ಮಾಡಿದ್ದರು.
ತಮ್ಮ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಯೋಜನೆಯಡಿ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ತಮ್ಮ ಸ್ಮಾರ್ಟ್‌ಫೋನ್ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸಬಹುದು.
Early khariffarmers crop survey 2021-22, https://play.google.com/stor/apps/details?id=com.csk.Khariffarmer 2021.cropsurvey. ಈ ಕೆಳಗಿನ ಲಿಂಕ್ ಅನ್ನು ರೈತರು ತಮ್ಮ ಸ್ಮಾರ್ಟ್‌ಫೋನ್‌ನ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅವಕಾಶ ಸಹ ನೀಡಲಾಗಿತ್ತು.
ಆ್ಯಪ್ ಕುರಿತು ಹೆಚ್ಚಿನ ವಿವರಗಳಿಗೆ 8448447715 ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ಇಲಾಖೆ ಮಾಹಿತಿ ನೀಡಿತ್ತು. ಬೆಳೆಗಳ ವಿವರಗಳನ್ನು ಸರಿಯಾಗಿ ಅಪ್‍ಲೋಡ್ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವ ಸಂಭವ ಇರುತ್ತದೆ. ರೈತರು ಆ್ಯಪ್ ಅಳವಡಿಸಿಕೊಂಡು ಬೆಳೆಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಬೇಕು.
ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಕಂದಾಯ ಇಲಾಖೆ, ರೇಷ್ಮೆ ಇಲಾಖೆ ಮತ್ತು ಆಯಾ ಗ್ರಾಮಗಳಿಗೆ ನಿಯೋಜಿಸಿದ ಖಾಸಗಿ ಪ್ರತಿನಿಧಿ ನಿವಾಸಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿತ್ತು.
ಖಾಸಗಿ ಪ್ರತಿನಿಧಿಗಳಿಂದ ಅಪ್‌ಲೋಡ್: ಜಿಲ್ಲೆಯಲ್ಲಿ ರೈತರೇ ಸ್ವಯಂ ಆಸಕ್ತಿಯಿಂದ ಬೆಳೆ ವಿವರಗಳನ್ನು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಅಪ್‌ಲೋಡ್ ಮಾಡಿರುವವರ ಸಂಖ್ಯೆ ಕಡಿಮೆ ಇದೆ. ಬೆಳೆ ಸಮೀಕ್ಷೆಗೆ ಖಾಸಗಿ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಅವರು ಒಂದು ಫ್ಲಾಟ್ ಸಮೀಕ್ಷೆ ಅಥವಾ ಒಬ್ಬ ರೈತರ ಮಾಹಿತಿ ಅಪ್‌ಲೋಡ್ ಮಾಡಿದರೆ ಅವರಿಗೆ ಇಂತಿಷ್ಟು ಹಣ ಎಂದು ನೀಡಲಾಗುತ್ತದೆ. ಖಾಸಗಿ ಪ್ರತಿನಿಧಿಗಳೇ ಜಿಲ್ಲೆಯಲ್ಲಿ ರೈತರ ಮಾಹಿತಿಯನ್ನು ಆ್ಯಪ್‌ನಲ್ಲಿ ಹೆಚ್ಚು ಅಪ್‌ಲೋಡ್ ಮಾಡಿದ್ದಾರೆ.
ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೂ ರೈತರೇ ಸ್ವತಃ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆಯ ಮಾಹಿತಿ ದಾಖಲಿಸಿರುವ ಸಂಖ್ಯೆ ಸಹ ಕಡಿಮೆ ಇದೆ. ಇಲ್ಲಿಯವರೆಗೆ 1.9 ಲಕ್ಷ ತಾಕುಗಳನ್ನು ಸ್ವತಃ ರೈತರೇ ಆ್ಯಪ್‌ನಲ್ಲಿ ಹಾಗೂ 28.96 ಲಕ್ಷ ತಾಕುಗಳನ್ನು ಖಾಸಗಿ ಪ್ರತಿನಿಧಿಗಳು ಅಪ್‌ಲೋಡ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.