ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’ ಜಾರಿಗೆ ಸಿದ್ಧತೆ

ಜಿಲ್ಲೆಯಲ್ಲಿ ನಾಳೆಯಿಂದ ಮನೆಗಳ್ಳರ ಮೇಲೆ ಕಣ್ಗಾವಲು
Last Updated 13 ನವೆಂಬರ್ 2020, 2:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳ್ಳರ ಭಯಕ್ಕೆ ಮನೆಗೆ ಬೀಗ ಹಾಕಿ ಕುಟುಂಬದ ಸದಸ್ಯರೆಲ್ಲ ಪ್ರವಾಸಕ್ಕೆ, ನೆಂಟರ ಮನೆಗೆ ಹೊರಡಲು ಆತಂಕ ಪಡುತ್ತಿದ್ದೀರಾ? ಇನ್ನು ಮೇಲೆ ನೀವು ಮನೆಗೆ ಬೀಗ ಹಾಕಿ ನಿರಾಳವಾಗಿ ಪರಸ್ಥಳಕ್ಕೆ ಹೋಗಬಹುದು. ನಿಮ್ಮ ಅನುಪಸ್ಥಿತಿಯಲ್ಲಿ ಪೊಲೀಸರು ನಿಮ್ಮ ಮನೆಯ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ!

ಕೇಳಲು ತುಸು ಸೋಜಿಗ ಎನಿಸಿದರೂ ಇದು ಸತ್ಯ. ಬೀಗ ಹಾಕಿದ ಮನೆಗಳಲ್ಲಿ ನಡೆಯುವ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿ ಶನಿವಾರದಿಂದ (ನ.14) ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’ (ಎಲ್‍ಎಚ್‍ಎಂಎಸ್) ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಎಲ್‌ಎಚ್‌ಎಂಎಸ್‌ ಯೋಜನೆ ಗಾಗಿಯೇ ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ 50 ಅತ್ಯಾಧುನಿಕ ಮೋಷನ್‌ ಸೆನ್ಸರ್ ಕ್ಯಾಮೆರಾಗಳನ್ನು ಖರೀದಿಸುವ ಜತೆಗೆ ‘ಎಲ್‍ಎಚ್‍ಎಂಎಸ್ ಚಿಕ್ಕಬಳ್ಳಾಪುರ ಪೊಲೀಸ್‌’ ಎಂಬ ಮೊಬೈಲ್ ಆ್ಯಪ್‌ ರೂಪಿಸಿದೆ. ಎಲ್‍ಎಚ್‍ಎಂಎಸ್ ಸೇವೆ ಪಡೆಯಲು ಬಯಸುವ ನಾಗರಿಕರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಈ ಆ್ಯಪ್‌ ಅನ್ನು ತಮ್ಮ ಮೊಬೈಲ್‌ಗೆ ಅಳವಡಿಸಿಕೊಂಡು ಪೂರ್ಣ ಮಾಹಿತಿ ಸಮೇತ ಹೆಸರು ನೋಂದಾಯಿಸಿಕೊಳ್ಳಬೇಕು.

ಎಲ್‍ಎಚ್‍ಎಂಎಸ್ ಆ್ಯಪ್‌ ಅಳವಡಿಸಿಕೊಂಡವರು ಮನೆಗೆ ಬೀಗ ಹಾಕಿಕೊಂಡು ಪರಸ್ಥಳಕ್ಕೆ ಹೋಗುವ ಒಂದು ದಿನ ಮುನ್ನ ಮೊಬೈಲ್ ಆ್ಯಪ್ ಮೂಲಕ request police watch ಆಯ್ಕೆ ಮೂಲಕ ಪೊಲೀಸರಿಗೆ ಯಾವಾಗಿನಿಂದ ಎಷ್ಟು ದಿನ ಮನೆಗೆ ಬೀಗ ಹಾಕಿ ಹೋಗುತ್ತೇವೆ ಎನ್ನುವ ಮಾಹಿತಿ ನೀಡಿದರೆ ಸಾಕು, ಸಂಬಂಧಪಟ್ಟ ಠಾಣೆಯ ಸಿಬ್ಬಂದಿ ಮನೆಗೆ ಬಂದು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ಇಡಲಿದ್ದಾರೆ.

ಮನೆ ಮಾಲೀಕರಿಲ್ಲದ ಸಮಯದಲ್ಲಿ ಯಾರಾದರೂ ಅಕ್ರಮವಾಗಿ ಮನೆ ಪ್ರವೇಶಿಸಿದರೆ ಪೊಲೀಸರು ಅಳವಡಿಸಿದ ಮೋಷನ್‌ ಸೆನ್ಸರ್ ಕ್ಯಾಮೆರಾ ಪೊಲೀಸ್‌ ನಿಯಂತ್ರಣ ಕೇಂದ್ರದಲ್ಲಿ ಸೈರನ್ ಶಬ್ಧ ಉಂಟು ಮಾಡಿ, ಮನೆಗಳ್ಳತನದ ಸುಳಿವು ನೀಡಲಿದೆ. ಇದರಿಂದ ಪೊಲೀಸರಿಗೆ ಮನೆಗಳ್ಳತನಗಳನ್ನು ಸುಲಭ ವಾಗಿ ತಹಬದಿಗೆ ತರಲು ಸಾಧ್ಯ ವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಎಲ್‍ಎಚ್‍ಎಂಎಸ್ ಸೇವೆಗೆ ಕೋರಿಕೆ ಸಲ್ಲಿಸಿದ ನಾಗರಿಕರ ಮನೆಗೆ ಪೊಲೀಸರು ಗರಿಷ್ಠ 15 ದಿನಗಳವರೆಗೆ ಕಣ್ಗಾವಲು ಸೇವೆ ನೀಡಲಿದ್ದಾರೆ. ಇದು ಕೂಡ ಸಂಪೂರ್ಣ ಉಚಿತವಾಗಿದೆ ಎನ್ನುವುದು ವಿಶೇಷ.

ಈಗಾಗಲೇ ಪೊಲೀಸರು ‘ಎಲ್‍ಎಚ್‍ಎಂಎಸ್ ಚಿಕ್ಕಬಳ್ಳಾಪುರ ಪೊಲೀಸ್‌’ ಆ್ಯಪ್ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಿರುಚಿತ್ರ ರೂಪಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಜಿಲ್ಲೆಯ ಜನರ ಸುರಕ್ಷತೆ ನಮಗೆ ಮೊದಲ ಆದ್ಯತೆ. ಅದಕ್ಕಾಗಿ ಜಿಲ್ಲೆಯಲ್ಲಿ ಎಲ್‍ಎಚ್‍ಎಂಎಸ್ ಯೋಜನೆಯನ್ನು ಮೊದಲ ಹಂತದಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅದಕ್ಕಾಗಿ 50 ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಜಿ.ಕೆ. ಮಿಥುನ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT