ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಿಯಲ್ ಎಸ್ಟೇಟ್ ಮತ್ತು ಭೂ ವ್ಯವಹಾರಗಳು ಏರುಗತಿಯಲ್ಲಿ ಸಾಗುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಭೂಮಿ ಮತ್ತು ನಿವೇಶನ ಖರೀದಿಗೆ ಬೆಂಗಳೂರಿಗರು ಚಿಕ್ಕಬಳ್ಳಾಪುರದಲ್ಲಿ ದೃಷ್ಟಿ ನೆಟ್ಟಿದ್ದಾರೆ.
ಇದಕ್ಕೆ ಪ್ರವಾಸೋದ್ಯಮವೂ ಬಲ ತುಂಬುತ್ತಿದೆ. ಆವಲಗುರ್ಕಿ ಬಳಿ ಈಶ ಯೋಗ ಕೇಂದ್ರದ ನಂತರ ಆ ಭಾಗದಲ್ಲಿ ಅಷ್ಟೇ ಅಲ್ಲ ಚಿಕ್ಕಬಳ್ಳಾಪುರದ ಪ್ರಮುಖ ಭಾಗಗಳಲ್ಲಿ ಭೂಮಿ, ನಿವೇಶನಗಳ ಬೆಲೆ ಮತ್ತಷ್ಟು ಹೆಚ್ಚಿದೆ. ಈಶ ಯೋಗ ಕೇಂದ್ರದ ಸುತ್ತಮುತ್ತ ಬೆಂಗಳೂರಿನ ಟೆಕ್ಕಿಗಳು ಎಕರೆಗಳ ಲೆಕ್ಕದಲ್ಲಿ ಜಮೀನು ಖರೀದಿಸಿ ಅವುಗಳನ್ನು ಚಿಕ್ಕ ಚಿಕ್ಕ ತಾಕುಗಳಾಗಿ ಹಂಚಿಕೊಳ್ಳುತ್ತಿರುವ ನಿದರ್ಶನಗಳು ಸಹ ಸಾಕಷ್ಟಿವೆ.
ನಂದಿಗಿರಿಧಾಮದ ಸುತ್ತಮುತ್ತ ಜಮೀನು, ನಿವೇಶನಗಳ ಬೆಲೆ ದುಬಾರಿ ಎನಿಸಿದೆ. ವಿಲ್ಲಾ, ಫ್ಲಾಟ್‌ಗಳನ್ನು ಖರೀದಿಸಿ ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಹೀಗೆ ಕೃಷಿ ಭೂಮಿಗಳು ನಿವೇಶನ, ವಿಲ್ಲಾಗಳಾಗಿ ದೊಡ್ಡ ಮಟ್ಟದಲ್ಲಿ ಪರಿವರ್ತನೆ ಆಗುತ್ತಿದೆ. ಈ ಹಿಂದಿನಿಂದಲೂ ನಂದಿಗಿರಿಧಾಮದ ಸುತ್ತ ಭೂಮಿಯು ನಿವೇಶನಗಳಾಗಿ ದೊಡ್ಡ ಮಟ್ಟದಲ್ಲಿ ಪರಿವರ್ತನೆಗಳಾಗಿವೆ. ಈಗ ಈಶ ಯೋಗ ಕೇಂದ್ರವು ಹೊಸ ಸೇರ್ಪಡೆ ಎನಿಸಿದೆ. ಈಶ ಯೋಗ ಕೇಂದ್ರದ ಸುತ್ತವೇ ಲೇಔಟ್‌ಗಳು ನಿರ್ಮಾಣವಾಗುತ್ತಿವೆ.
ಚಿಕ್ಕಬಳ್ಳಾಪುರ ಪ್ರವೇಶಿಸುವ ಮತ್ತು ಚಿಕ್ಕಬಳ್ಳಾಪುರ ಹೊರಗಿನ ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತ ತಲೆ ಎತ್ತಿರುವ ಬಡಾವಣೆಗಳು, ನಿವೇಶಗಳು ಭೂ ವಹಿವಾಟಿನಲ್ಲಿ ಚಿಕ್ಕಬಳ್ಳಾಪುರವು ವೇಗ ಪಡೆಯುತ್ತಿರುವುದನ್ನು ಸಾರುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಭೂಮಿಯ ಬೆಲೆ ಏರುಗತಿಯಲ್ಲಿದೆ ಎನ್ನುವುದನ್ನು ತಿಳಿದ ಸಚಿವರೊಬ್ಬರು ಇತ್ತೀಚೆಗೆ ಯಾವುದೇ ಬೆಂಗಾವಲು ವಾಹನವಿಲ್ಲದೆ, ಸ್ಥಳೀಯ ಪರಿಚಿತರನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸುತ್ತಮುತ್ತ ಜಮೀನು ಹುಡುಕಲು ಸಹ ಬಂದಿದ್ದರು.
ಬೆಂಗಳೂರು–ಚಿಕ್ಕಬಳ್ಳಾಪುರ ರಸ್ತೆ, ಬಾಗೇಪಲ್ಲಿ ರಸ್ತೆ, ಶಿಡ್ಲಘಟ್ಟ ರಸ್ತೆ, ಗೌರಿಬಿದನೂರು ರಸ್ತೆ ಹಾಗೂ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲೇಔಟ್‌ಗಳು, ಫಾರಂ ಹೌಸ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಾಣಬಹುದು.
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಐತಿಹಾಸಿಕ ಪ್ರಸಿದ್ಧ ನಂದಿಗಿರಿಧಾಮ, ಈಶ ಯೋಗ ಕೇಂದ್ರ ಹೀಗೆ ಪ್ರಮುಖ ತಾಣಗಳ ಕಾರಣಕ್ಕೂ ಚಿಕ್ಕಬಳ್ಳಾಪುರದಲ್ಲಿ ಭೂ ವ್ಯವಹಾರಗಳು ಏರುಗತಿಯಲ್ಲಿದೆ.
ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಭೂ ವ್ಯವಹಾರಗಳು ಮತ್ತಷ್ಟು ವೇಗವಾಗಿ ಬೆಳೆಯುತ್ತವೆ ಎನ್ನುವ ವಿಶ್ವಾಸವನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ವ್ಯಕ್ತಪಡಿಸುವರು.
‘ಭ್ರಷ್ಟಾಚಾರ ಇಳಿಕೆಯಾದರೆ ಮತ್ತಷ್ಟು ವೇಗ’
ಚಿಕ್ಕಬಳ್ಳಾಪುರದಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ ನಿಜ. ಇದರ ಜೊತೆಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚಿಕ್ಕಬಳ್ಳಾಪುರದ ಅಧಿಕಾರಿ ಮತ್ತು ಜನಪ್ರತಿನಿಧಿಗಳ ವಲಯ ಬಗ್ಗೆ ಉತ್ತಮ ಮಾತುಗಳು ಇಲ್ಲ. ಈ ಕಾರಣದಿಂದ ವೇಗಕ್ಕೆ ಸ್ವಲ್ಪ ತಡೆಯೂ ಬಿದ್ದಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಜಮೀನು ಪರಿವರ್ತನೆ ನಿವೇಶನ ಪರಿವರ್ತನೆ ಬಿಡುಗಡೆ ಎಲ್ಲದಕ್ಕೂ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಣ ಕೊಡಬೇಕು. ಎಕರೆಗಳಿಗೆ ಇಂತಿಷ್ಟು ಎಂದು ನಿಗದಿ ಸಹ ಮಾಡಿದ್ದಾರೆ. ಎಲ್ಲ ಕಡೆಯೂ ಇದು ಇದೆ. ಇದು ಬಹಿರಂಗ ಸತ್ಯ. ಆದರೆ ಚಿಕ್ಕಬಳ್ಳಾಪುರದಲ್ಲಿ ಹಣ ನೀಡಿದರೂ ಕೆಲಸ ಆಗುವುದಿಲ್ಲ ಸತಾಯಿಸಲಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಹಣ ನೀಡಿ ಅವರನ್ನು ಓಲೈಸಿದ ನಂತರವೇ ಭೂಮಿ ಪರಿವರ್ತನೆ ನಿವೇಶನ ಬಿಡುಗಡೆ ಪ್ರಕ್ರಿಯೆ ಸಾಧ್ಯ. ಈ ಹಿಂದೆ ಹಣ ನೀಡಿದರೂ ಕಡತಗಳಿಗೆ ಬೇಗ ಮುಕ್ತಿ ದೊರೆಯುತ್ತಿರಲಿಲ್ಲ. ಆದರೆ ಈಗ ಎಕರೆಗಳಿಗೆ ಅಂದಿಗಿಂತ ಹಣ ದುಪ್ಪಟ್ಟಾಗಿದೆ. ಕೆಲಸಗಳು ಸಹ ವೇಗವಾಗುತ್ತಿವೆ ಎನ್ನುತ್ತಾರೆ. ಈ ಕಾರಣದಿಂದ ಬೆಂಗಳೂರಿನ ಬಿಲ್ಡರ್‌ಗಳು ಚಿಕ್ಕಬಳ್ಳಾಪುರದಲ್ಲಿ ಭೂಮಿ ಖರೀದಿ ನಿವೇಶನಗಳನ್ನು ರೂಪಿಸಲು ಹಿಂದೇಟು ಹಾಕುವರು ಎಂದರು.
‘ಹೂಡಿಕೆ ಮಾಡಿದರೆ ಲಾಭ ಖಚಿತ’
ಬೆಂಗಳೂರು ಉತ್ತರ ಭಾಗದ ಜನರು ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಸಮೀಪದಲ್ಲಿದೆ ಎನ್ನುವುದು ಒಂದು ಕಾರಣವಾದರೆ ವಾತಾವರಣ ಉತ್ತಮವಾಗಿದೆ ಮತ್ತು ಭವಿಷ್ಯದಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲಿದೆ ಎನ್ನುವ ದೃಷ್ಟಿಯಿಂದ ಹೂಡಿಕೆಗೆ ಮನಸ್ಸು ಮಾಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಸಂದೀಪ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಮುಂದಿನ 15ರಿಂದ 20 ವರ್ಷಗಳವರೆಗೂ ಚಿಕ್ಕಬಳ್ಳಾಪುರವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉತ್ತುಂಗ ಮಟ್ಟದಲ್ಲಿ ಇರುತ್ತದೆ. ದಿನದಿಂದ ದಿನಕ್ಕೆ ಬೆಲೆಗಳು ಸಹ ಹೆಚ್ಚುತ್ತಿವೆ. ಎರಡು ವರ್ಷಗಳ ಹಿಂದಿನ ಬೆಲೆ ಮತ್ತು ಇಂದಿನ ಬೆಲೆಗೆ ಅಜಗಜಾಂತರ ವ್ಯತ್ಯಾಸವಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದರು. ಬೆಂಗಳೂರಿನ ಬೇರೆ ಕಡೆಗಳಿಗೆ ಹೋಲಿಸಿದರೆ ವಂಚನೆಗಳು ಪ್ರಮಾಣ ಸಹ ಕಡಿಮೆ ಇದೆ ಎನ್ನುವ ಭಾವನೆ ಜನರಲ್ಲಿ ಇದೆ. ಈ ಕಾರಣದಿಂದ ಹೂಡಿಕೆ ಮಾಡುತ್ತಿದ್ದಾರೆ ಎಂದರು.
‘ಭೂಮಿ ಖರೀದಿಯೂ ಹೆಚ್ಚು’
ಬೆಂಗಳೂರಿಗರಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಗಳ ಜನರು ಸಹ ಭೂಮಿ ಹುಡುಕಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ಒಂದು ದಿನ ಮೂರ್ನಾಲ್ಕು ಮಂದಿಗೆ ಜಮೀನುಗಳನ್ನು ತೋರಿಸಿದ್ದೇವೆ ಎನ್ನುತ್ತಾರೆ ಭೂ ವ್ಯವಹಾರದಲ್ಲಿ ತೊಡಗಿರುವ ಚಿಕ್ಕಬಳ್ಳಾಪುರದ ಮಧು. ನಾವು ತೋರಿಸಿದ ಜಮೀನು ಖರೀದಿಸಿ ಸ್ವಲ್ಪ ದಿನಕ್ಕೆ ಆ ಜಮೀನನ್ನು ನಮ್ಮ ಮೂಲಕವೇ ಮಾರಾಟ ಮಾಡಿಸಿ ಲಾಭ ಮಾಡಿಕೊಂಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.